×
Ad

ಉತ್ತರ ಕರ್ನಾಟಕ ಭಾಗದ ಹಲವೆಡೆ ಗುಡುಗು ಸಹಿತ ಭಾರೀ ಮಳೆ

Update: 2021-04-10 22:13 IST

ವಿಜಯಪುರ, ಎ.10: ಬಿರು ಬೇಸಿಗೆ ಬಿಸಿಲಿನ ಮಧ್ಯೆಯೇ ವಿಜಯಪುರ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ.

ಈ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಾಂಶವೂ ಪ್ರತಿವರ್ಷಕ್ಕಿಂತಲೂ ಹೆಚ್ಚಾಗಿದ್ದು, ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಶನಿವಾರ ಮಧ್ಯಾಹ್ನದಿಂದಲೇ ಸುರಿದ ಮಳೆ ತಂಪೆರೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಬಿರುಗಾಳಿಗೆ ಬೃಹತ್ ಮರವೊಂದು ನೆಲಕ್ಕೆ ಉರುಳಿ ಬಿದ್ದಿದ್ದು, 12 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಆ ಭಾಗದಲ್ಲಿನ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

ಬಾದಾಮಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆಯೂ ಗುಡುಗು ಮತ್ತು ಮಿಂಚಿ ಸಹಿತ ಮಳೆಯಾಗಿದೆ. ಮಳೆಯ ಪರಿಣಾಮ ಧಾರವಾಡದ ಉದಯ ಹಾಸ್ಟೆಲ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಳೆ ಬರುವ ಮೊದಲು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಜೋರಾದ ಗಾಳಿ ಬೀಸಿತ್ತು. ಎರಡೂ ನಗರಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಜಯಪುರ ನಗರ ಸೇರಿದಂತೆ, ಆಲಮೇಲ, ತಾಲಿಕೋಟೆ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಧಿಡೀರ್ ಸುರಿದ ಮಳೆಯಿಂದ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕಗೊಂಡಿದ್ದು, ಆಕಾಲಿಕ ಮಳೆಯಿಂದಾಗಿ ಒಣದ್ರಾಕ್ಷಿ ಹಾನಿಯಾಗುತ್ತದೆ ಎಂದು ಭೀತಿಗೊಂಡಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಅಲ್ಲಲ್ಲಿ ಮಳೆ ಬಿದ್ದ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News