ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರ ಆರಂಭ

Update: 2021-04-10 17:02 GMT

ಮಡಿಕೇರಿ, ಎ.10: ಕೊಡಗು ಜಿಲ್ಲೆಯಲ್ಲಿಯೂ ಸಾರಿಗೆ ನೌಕರಕರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಕೊಡಗು ಜಿಲ್ಲೆಯ ಮೂಲಕ ಸಂಚರಿಸುವ ಯಾವುದೇ ಬಸ್‍ಗಳು ಶನಿವಾರವೂ ರಸ್ತೆಗೆ ಇಳಿಯಲಿಲ್ಲ. ಈ ನಡುವೆ ಪುತ್ತೂರು ಮತ್ತು ಮಂಗಳೂರು ಘಟಕದ ಬಸ್‍ಗಳು ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸುವ ಮೂಲಕ ಸಾರ್ವಜನಿಕರಿಗೆ ಸೇವೆ ನೀಡಿದವು.

ಪುತ್ತೂರು-ಮಡಿಕೇರಿ ಮತ್ತು ಮಂಗಳೂರು-ಬೆಂಗಳೂರು ಐರಾವತ ಬಸ್ ಮಡಿಕೇರಿ ಮೂಲಕ ಸಂಚರಿಸಿದವು. ಪುತ್ತೂರು ಡಿಪೋದಿಂದ ಒಟ್ಟು 11 ಬಸ್‍ಗಳನ್ನು ರಸ್ತೆಗೆ ಇಳಿಸಲಾಗಿದೆ ಎಂದು ಮಡಿಕೇರಿಗೆ ಆಗಮಿಸಿದ ಬಸ್‍ನ ಚಾಲಕ ಮಾಹಿತಿ ನೀಡಿದರು. ಮಂಗಳೂರು-ಪುತ್ತೂರು-ಮಡಿಕೇರಿ ಮಾರ್ಗವಾಗಿ ಬೆಳಗ್ಗೆ 7 ಗಂಟೆಗೆ 2 ಸರಕಾರಿ ಬಸ್‍ಗಳು ಸಂಚರಿಸಿದ್ದನ್ನು ಹೊರತುಪಡಿಸಿದರೆ ಮಡಿಕೇರಿ ಉಪ ಘಟಕದಿಂದ ಯಾವುದೇ ಬಸ್‍ಗಳು ಸೇವೆಗೆ ಇಳಿಯಲಿಲ್ಲ. 

ಇನ್ನು ಮಡಿಕೇರಿ ಉಪ ಘಟಕದಲ್ಲಿ ತರಬೇತಿನಿರತ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಮುಷ್ಕರವನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಇಲಾಖೆ ನೊಟೀಸ್ ಕೂಡ ನೀಡಿದೆ. ತರಬೇತಿ ಅವಧಿಯಲ್ಲಿ ಮುಷ್ಕರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶವಿಲ್ಲ. ತಕ್ಷಣವೇ ಕರ್ತವ್ಯಕ್ಕೆ ಮರಳದಿದ್ದಲ್ಲಿ ನಿಮ್ಮನ್ನು ತರಬೇತಿಯಿಂದ ವಜಾ ಮಾಡುವುದಾಗಿ ನೊಟೀಸ್ ಮೂಲಕ ಎಚ್ಚರಿಕೆಯನ್ನೂ ನೀಡಲಾಗಿದೆ. 

ಇನ್ನು ಜಿಲ್ಲೆಯ ಖಾಸಗಿ ಬಸ್‍ಗಳು ತಮ್ಮ ಅಧಿಕೃತ ಮಾರ್ಗಗಳಲ್ಲಿ ಎಂದಿನಂತೆ ಸೇವೆ ಒದಗಿಸಿದ್ದವು. ಟೂರಿಸ್ಟ್ ಟ್ಯಾಕ್ಸಿಗಳು, ಮಿನಿ ಬಸ್‍ಗಳು ಮಡಿಕೇರಿ-ಕುಶಾಲನಗರ, ಮಡಿಕೇರಿ-ಸುಳ್ಯ ಕಡೆಗಳಿಗೆ ಪ್ರಯಾಣಿಕರನ್ನು ಕರೆದುಕೊಂಡು ಸಾಗಿದವು. ಖಾಸಗಿ ಬಸ್‍ಗಳಿಗಿಂತ ಖಾಸಗಿ ಸೇವೆಗಾಗಿ ಹೆಚ್ಚುವರಿ ದರ ತೆರಬೇಕಾದ ಅನಿವಾರ್ಯತೆಯ ನಡುವೆ ಪ್ರಯಾಣಿಕರು ಬೇರೆ ದಾರಿ ಕಾಣದೇ ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News