ರಾಜ್ಯದಲ್ಲಿ ಎ.30ರೊಳಗೆ ಉಚಿತ ಮರಳು ನೀತಿ ಜಾರಿ: ಸಚಿವ ಮುರುಗೇಶ್ ನಿರಾಣಿ

Update: 2021-04-11 08:00 GMT

ಕಲಬುರಗಿ, ಎ.11: ಶ್ರೀ ಸಾಮಾನ್ಯರು ಹಾಗೂ ಕಡುಬಡವರು ಕಡಿಮೆ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಎ.30ರಿಂದ ರಾಜ್ಯಾದ್ಯಂತ ಉಚಿತ ಮರಳು ನೀತಿ ಜಾರಿಗೆ ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಘೋಷಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ವಿತರಣೆ ಮಾಡಬೇಕೆಂಬುದು ಸರಕಾರದ ಪ್ರಮುಖ ಉದ್ದೇಶ. ಹೀಗಾಗಿಯೇ ಇದೇ 30ರಿಂದ ಅನ್ವಯವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಉಚಿತ ಮರಳು ನೀತಿ ಜೊತೆಗೆ ಎ.30ರೊಳಗೆ ಹೊಸ ಮರಳು ನೀತಿಯನ್ನು ಜಾರಿ ಮಾಡಲಿದ್ದೇವೆ. ಈಗಾಗಲೇ ಮರಳು ನೀತಿ ಸಿದ್ಧವಾಗಿದ್ದು, ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಲಿದೆ. ಬೇರೆ ರಾಜ್ಯಗಳು ಕೂಡ ಕರ್ನಾಟಕ ಮಾದರಿಯನ್ನು ಅನುಸರಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹತ್ತು ಲಕ್ಷ ರೂ. ಒಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು ವಿತರಣೆ ಮಾಡಲಿದ್ದೇವೆ.  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ. ಹಳ್ಳಕೊಳ್ಳ, ಚೆಕ್‍ಡ್ಯಾಂ, ಝರಿಗಳಲ್ಲಿ ಉಚಿತವವಾಗಿ ಮರಳು ತೆಗೆದು ಎತ್ತಿನ ಗಾಡಿ ಮೂಲಕ  ಸಾಗಣೆಗೆ ಅವಕಾಶ ನೀಡಲಾಗುವುದು ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

 ಇದೇ 17ರಂದು ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭೆ,ಮಸಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಕಾಂಗ್ರೆಸ್ ಏನೇ ಆರೋಪ ಮಾಡಿದರೂ ಜನರು ನಂಬುವುದಿಲ್ಲ ಎಂದು ಟೀಕಿಸಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ಇಲಾಖೆ ಸಿಬ್ಬಂದಿ ಕಳೆದ 5 ದಿನಗಳಿಂದ ನಡೆಸುತ್ತಿರುವ ಮುಷ್ಕರ ಕಾನೂನುಬಾಹಿರವಾಗಿದೆ. ಇದಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇಲ್ಲ. ಆರನೇ ವೇತನ ಆಯೋಗವನ್ನು ಜಾರಿ ಮಾಡಲು ಯಾವುದೇ ಕಾರಣಕ್ಕೂ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಸಿಎಂ ಮತ್ತು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಆದರೂ ಕೆಲವರು ರಾಜಕೀಯ ಪ್ರೇರಿತವಾಗಿ ಹೋರಾಟ ಮಾಡುವುದು ಸರಿಯಲ್ಲ. ಕಾರ್ಮಿಕರ ಒಂಭತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನು ಸರಕಾರ ಈಡೇರಿಸಿದೆ. ಇದನ್ನು ಅರ್ಥ ಮಾಡಿಕೊಂಡು  ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

ಉಪಚುನಾವಣೆ ನಂತರ ವೇತನ ಹೆಚ್ಚಳ ಮಾಡುವ ಸ್ಪಷ್ಟ ಭರವಸೆ ನೀಡಲಾಗಿದೆ. ನೌಕರರು ಕೂಡಲೇ ಪ್ರತಿಭಟನೆ ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕು. ಪ್ರತಿಭಟನೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾರ್ಮಿಕರು ಹೋರಾಟಕ್ಕೆ ಇಳಿಯುವಾಗ ರಾಜಕೀಯ ಪ್ರೇರಿತ ವ್ಯಕ್ತಿ ಇಟ್ಟುಕೊಂಡು ಹೋಗುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News