ಅರುಣ್ ಸಿಂಗ್ ರಾಜ್ಯಕ್ಕೆ ಬರುವ ಮೊದಲು ಬಸವಣ್ಣನವರ ಇತಿಹಾಸ ಅರಿತುಕೊಳ್ಳಲಿ: ಸತೀಶ್ ಜಾರಕಿಹೊಳಿ

Update: 2021-04-11 11:29 GMT

ಬೆಳಗಾವಿ, ಎ. 11: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಅವರು ಕರ್ನಾಟಕ ರಾಜ್ಯಕ್ಕೆ ಬರುವ ಮೊದಲು ಸಮಾಜ ಸುಧಾರಕ ಬಸವಣ್ಣನವರ ಇತಿಹಾಸ ತಿಳಿದುಕೊಂಡು ಬರಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಾಂಗ್ರೆಸ್ ಅಭ್ಯರ್ಥಿ ಹಿಂದೂ ವಿರೋಧಿ' ಎಂಬ ಅರುಣ್ ಸಿಂಗ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಅರುಣ್ ಸಿಂಗ್ ಕರ್ನಾಟಕ ರಾಜ್ಯಕ್ಕೆ ಕಾಲಿಡುವ ಮೊದಲು ಬಸವಣ್ಣನವರ ಇತಿಹಾಸ ಅರಿತುಕೊಳ್ಳಬೇಕು. ಅವರು ಯಾವ ರೀತಿಯಾಗಿ ಹೋರಾಟ ಮಾಡಿದ್ದಾರೆಂಬುವುದನ್ನು ಮೊದಲು ಓದಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಮ್ಮ ರಾಜ್ಯದಲ್ಲಿ ಮೌಢ್ಯ ವಿರೋಧಿ ಹೋರಾಟ ಆರಂಭವಾಗಿದ್ದು 6ನೆ ಶತಮಾನದಲ್ಲಿ. ಮೌಢ್ಯ ವಿರೋಧಿ ಹೋರಾಟವನ್ನು ಸತೀಶ್ ಜಾರಕಿಹೊಳಿ ಆರಂಭ ಮಾಡಿದ್ದಲ್ಲ. ಬಸವಣ್ಣನವರು ರೂಪಿಸಿದ ವಚನ ಚಳವಳಿ ಇದನ್ನೇ ಮಾಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿಯೂ ಬರೆದಿದ್ದಾರೆ. ಅವರ ವಿಚಾರಗಳನ್ನು ನಾವು ಅನುಸರಿಸುತ್ತಿದ್ದೇವೆ. ಅರುಣ್ ಸಿಂಗ್ ಏನೇ ಕೇಳಬೇಕಾದರೂ ಅವರನ್ನೇ ಕೇಳಬೇಕು ಎಂದು ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಉಪಚುನಾವಣೆ ಪ್ರಚಾರದಲ್ಲಿ ಯಾವುದೇ ವಿಷಯಗಳಿಲ್ಲ. ಹೀಗಾಗಿ ಧರ್ಮ-ಜಾತಿ ಅಷ್ಟೇ ಅವರಿಗೆ ಚುನಾವಣೆ ವಿಷಯಗಳಾಗಿವೆ. ಅದೇ ವಿಚಾರಗಳ ಬಗ್ಗೆಯೇ ಮಾತನಾಡುತ್ತಾರೆ. ಆದರೆ, ಅವರಿಗೆ ತಮ್ಮ ಸರಕಾರಗಳ ಅಭಿವೃದ್ಧಿ ವಿಚಾರಗಳನ್ನು ಹೇಳಲು ಏನೂ ಇಲ್ಲ. ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಸತೀಶ್ ವಾಗ್ದಾಳಿ ನಡೆಸಿದರು.

ಕೋಮುಗಲಭೆ ಮಾಡುವವರು ಬಿಜೆಪಿಯವರೇ ಹೊರತು, ಕಾಂಗ್ರೆಸ್ ಪಕ್ಷದವರಲ್ಲ. ಬಿಜೆಪಿಯ ಯಾವುದೇ ನಾಯಕರು, ರಾಷ್ಟ್ರ ನಾಯಕರು ಬಂದರು ಬೆಳಗಾವಿ ಉಪಚುನಾವಣೆ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಜನರು ಯಾರಿಗೆ ಮತ ನೀಡಬೇಕು ಎಂದು ನಿರ್ಧರಿಸಿದ್ದಾರೆ. ಬೆಳಗಾವಿ ಮತದಾರರ ನಿರ್ಧಾರವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ನುಡಿದರು.

ಕೇಂದ್ರದ ಬಿಜೆಪಿ ಸರಕಾರದ ಏಳು ವರ್ಷದ ಆಡಳಿತ ಅವಧಿಯಲ್ಲಿಯೇ ಹೆಚ್ಚು ಉಗ್ರರ ದಾಳಿಗಳಾಗಿವೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಉಗ್ರರ ದಾಳಿಗಳು ಹೆಚ್ಚಾಗಿಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹುತಾತ್ಮರಾದ ಸೈನಿಕರು ಕಡಿಮೆ. ಈಗಿನ ಸರಕಾರದಲ್ಲಿಯೇ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ ಎಂಬುದನ್ನು ದೇಶದ ಜನತೆ ಅರಿಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆಂದು ಸತೀಶ್ ಜಾರಕಿಹೊಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News