ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿಗೆ ಜಾನುವಾರುಗಳು ಬಲಿ

Update: 2021-04-11 12:20 GMT

ಮಡಿಕೇರಿ, ಎ.11: ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ದಾಳಿ ಮುಂದುವರಿದಿದ್ದು, ಕೆಲ ಜಾನುವಾರುಗಳನ್ನು ಬಲಿ ಪಡೆದುಕೊಂಡಿದೆ.

ಇದೀಗ ಪೊನ್ನಪ್ಪಸಂತೆ ಸಮೀಪದ ನಲ್ಲೂರಿನ ಪುಚ್ಚಿಮಾಡ ಲಾಲಾ ಪೂಣಚ್ಚ ಎಂಬವರಿಗೆ ಸೇರಿದ ಎಮ್ಮೆಯ ಮೇಲೆ ಹುಲಿ ದಾಳಿ ನಡೆಸಿದ್ದು, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಎಮ್ಮೆಯು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ.

ಮನೆಯ ಸಮೀಪದ ಕೊಟ್ಟಿಗೆಯಲ್ಲಿದ್ದ ಎಮ್ಮೆಯ ಮೇಲೆ ಬೆಳಗಿನ ಜಾವ ಹುಲಿ ದಾಳಿ ನಡೆಸಿದೆ. ಈ ವೇಳೆ ಕೊಟ್ಟಿಗೆಯಲ್ಲಿದ್ದ ಉಳಿದ ಎಮ್ಮೆಗಳು ಜೋರಾಗಿ ಕಿರುಚಿಕೊಂಡಾಗ ಹುಲಿಯು ಬೆದರಿ ಓಡಿ ಹೋಗಿದೆ. ಎಮ್ಮೆಗಳ ಕಿರುಚಾಟದಿಂದ ಮಾಲಕರು ಹಾಗೂ ಕಾರ್ಮಿಕರು ಹೊರ ಬಂದು ಟಾರ್ಚ್ ಬೆಳಕಿನ ಮೂಲಕ ನೋಡಿದಾಗ ಹುಲಿಯು ಸಮೀಪದ ತೋಟದಲ್ಲಿ ಮರೆಯಾಗಿದೆ.

ಕೆಲ ದಿನಗಳ ಹಿಂದೆ ಹುಲಿಯು ಬಾಳೆಲೆ ಸಮೀಪದ ಸ್ವಾತಿ ಕುಟ್ಟಯ್ಯ ಎಂಬವರಿಗೆ ಸೇರಿದ ಹಸುವನ್ನು ಕೊಂದು ಮೇಕೆಯನ್ನು ಹೊತ್ತೊಯ್ದಿತ್ತು. ಇದೇ ಹುಲಿ ಈ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹುಲಿಯು ಇದೀಗ ಮತ್ತೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.

ಮತ್ತೊಂದೆಡೆ ಬಿಳೂರು ಗ್ರಾಮದಲ್ಲೂ ಹುಲಿ ದಾಳಿ ನಡೆಸಿದ್ದು, ಗ್ರಾಮದ ನಿವಾಸಿ ಕಾಂಡೇರ ಲತಾ ಗಣೇಶ್ ಅವರಿಗೆ ಸೇರಿದ ಎರಡು ಹಸುಗಳನ್ನು ಬಲಿ ಪಡೆದುಕೊಂಡಿದೆ.

ಒಟ್ಟಿನಲ್ಲಿ ದಕ್ಷಿಣ ಕೊಡಗಿನಲ್ಲಿ ಹುಲಿಗಳ ಅಟ್ಟಹಾಸ ಮುಂದುವರಿದಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ  ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ಸಂಚಾರದ ಸ್ಥಳಗಳಲ್ಲಿ ಬೋನ್‍ಗಳನ್ನು ಅಳವಡಿಸುವುದಕ್ಕೂ ಅರಣ್ಯ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News