ಸಾರಿಗೆ ನೌಕರರ ಮುಷ್ಕರ ಕಾನೂನು ಬಾಹಿರ ಎಂದ ಸಚಿವ ಶಿವರಾಮ ಹೆಬ್ಬಾರ್

Update: 2021-04-11 12:35 GMT

ಕಲಬುರಗಿ, ಎ.11: ಸಾರಿಗೆ ನೌಕರರು ಕಳೆದ ಐದು ದಿನಗಳಿಂದ ನಡೆಸುತ್ತಿರುವ ಸಾರಿಗೆ ಮುಷ್ಕರ ಕಾನೂನು ಬಾಹಿರವಾಗಿದ್ದು, ಕೂಡಲೇ ಮುಷ್ಕರವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಬೇಕೆಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಮಿಕನ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಆದರೆ, ಕಾನೂನು ವಿರುದ್ಧವಾಗಿ ಯಾರೇ ಹೋದರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸಾರಿಗೆ ಇಲಾಖೆಯಿಂದ ವಜಾಗೊಂಡ ನೌಕರರು ಕಾರ್ಮಿಕ ಇಲಾಖೆ ಮುಂದೆ ಬಂದರೆ ವಿಚಾರಿಸಿ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕಾದ ಸಾರಿಗೆ ನೌಕರರು ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ ಇಲ್ಲ. ಹಾಗೂ ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಅನುಮತಿ ಇಲ್ಲ. ಈ ಬಗ್ಗೆ ನೌಕರರಿಗೆ ಎಷ್ಟೆ ತಿಳಿಸಿ ಹೇಳುತ್ತಿದ್ದರೂ ತಿಳಿದುಕೊಳ್ಳುವ ಗೋಜಿಗೆ ಹೋಗುತ್ತಿಲ್ಲವೆಂದು ಅವರು ವಿಷಾದಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರದಿಂದ ಪ್ರತಿದಿನ ಸಾರಿಗೆ ಇಲಾಖೆಗೆ ಬರಬೇಕಾದ ಆದಾಯ ಕೈತಪ್ಪುತ್ತಿದೆ. ರಾಜ್ಯ ಸರಕಾರ ಸಾರಿಗೆ ನೌಕರರ ಸಂಬಳಕ್ಕೆ  ಹಣ ಬಿಡುಗಡೆ ಮಾಡಿ ನೆರವು ನೀಡಿದೆ. ವೇತನ ಪರಿಷ್ಕರಣೆಯ ಬಗೆಗೂ ಮೇ 5ರ ನಂತರ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದೆ. ಆದರೂ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಅನಿವಾರ್ಯವಾಗಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಮಿಕರಿಗೆ ಪ್ರತ್ಯೇಕ ವೆಬ್‍ಸೈಟ್

ರಾಜ್ಯದಲ್ಲಿ 22 ಲಕ್ಷ ಕಾರ್ಮಿಕರು ಇದ್ದು, ಅವರೆಲ್ಲರ ನೋಂದಣಿಗಾಗಿ ಪ್ರತ್ಯೇಕ ವೆಬ್‍ಸೈಟ್ ಒಂದನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಇದು ಕಾರ್ಯರೂಪಕ್ಕೆ ಬರಲಿದೆ. ಹೀಗೆ ಕಾರ್ಮಿಕರಿಗಾಗಿಯೇ ಪ್ರತ್ಯೇಕ ವೆಬ್‍ಸೈಟ್ ಮಾಡುತ್ತಿರುವುದು ದೇಶದಲ್ಲೇ ಮೊದಲಾಗಿದೆ.

-ಶಿವರಾಮ್ ಹೆಬ್ಬಾರ್, ಕಾರ್ಮಿಕ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News