ಕೊರೋನ ಎರಡನೆ ಅಲೆ: ಜನತೆ ಮಾರ್ಗಸೂಚಿ ಪಾಲಿಸದಿದ್ದರೆ ಲಾಕ್‍ಡೌನ್ ಅನಿವಾರ್ಯ ಎಂದ ಸಚಿವ ಸುಧಾಕರ್

Update: 2021-04-11 13:17 GMT

ಬೆಂಗಳೂರು, ಎ. 11: ರಾಜ್ಯದಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ನಿನ್ನೆಯಿಂದ ಮುಂದಿನ 10 ದಿನಗಳ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಜನತೆ ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಪಾಲಿಸುವ ಮೂಲಕ ಸಹಕಾರ ನೀಡಬೇಕು. ಇಲ್ಲವಾದರೆ ಲಾಕ್‍ಡೌನ್ ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೀಗಾಗಲೆ ಕೆಲವು ರಾಜ್ಯಗಳಲ್ಲಿ ಲಾಕ್‍ಡೌನ್ ಮಾಡಿದ್ದಾರೆ. ಏಕೆಂದರೆ ಜನರು ಉದಾಸೀನತೆ ಮಾಡಿದಾಗ ಅಲ್ಲಿ ಲಾಕ್‍ಡೌನ್ ನಿರ್ಧಾರ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಲಾಕ್‍ಡೌನ್ ಬೇಡ ಎಂದರೆ ಜನರು ಉದಾಸೀನ ಮಾಡಬಾರದು. ಸರಕಾರ ಮಾಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಲಾಕ್‍ಡೌನ್‍ಗೆ ಅವಕಾಶ ಮಾಡಿಕೊಡಬಾರದು ಎಂದು ಕೋರಿದರು.

ನಿನ್ನೆ ರಾತ್ರಿ ಸರಕಾರಿ ಆಸ್ಪತ್ರೆಗಳ ವ್ಯವಸ್ಥೆ ಪರಿಶೀಲಿಸಬೇಕು ಎಂದು ತೆರಳಿದ್ದೆ. 108 ಆಂಬ್ಯುಲೆನ್ಸ್‍ಗೆ ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಸೂಚಿಸಲಾಗಿದೆ ಎಂದ ಅವರು, ಜನರು ಜಾಗೃತರಾದರೆ ಯಾವುದೇ ಲಾಕ್‍ಡೌನ್ ಅಗತ್ಯ ಬರುವುದಿಲ್ಲ. ಸಾರ್ವಜನಿಕರ ಮೇಲೆ ಜವಾಬ್ದಾರಿ ಇದೆ. ಕೊರೋನ ನಿಯಂತ್ರಣವನ್ನು ಜನರೂ ಮಾಡಿದರೆ ನಾವು ಇನ್ನಷ್ಟು ಸಬಲವಾಗಿರುತ್ತೇವೆ ಎಂದು ಹೇಳಿದರು.

ಇಂದಿನಿಂದ ಎ.14ರ ವರೆಗೆ ಲಸಿಕಾ ಉತ್ಸವ ಆಚರಣೆ ಮಾಡುತ್ತಿದ್ದೇವೆ. ಕರ್ನಾಟಕದ ಲಸಿಕಾ ಉತ್ಸವಕ್ಕೆ ಇಲ್ಲಿಂದ ಚಾಲನೆ ನೀಡಿದ್ದೇವೆ. ಎಲ್ಲ ಧರ್ಮದ ಮಹಿಳೆಯರಿಗೆ ಲಸಿಕೆ ನೀಡಲಾಗಿದೆ. ಸಾಮಾಜಿಕ ಸುಧಾರಕ ಜ್ಯೋತಿ ಬಾಫುಲೆ ಮಹಿಳಾ ಸಬಲೀಕರಣಕ್ಕೆ ಹೋರಾಟ ಮಾಡಿದ ಮಹಾನುಭಾವರು. ಅವರ ಆಲೋಚನೆಗೆ ಹೆಚ್ಚು ಶಕ್ತಿ ನೀಡಬೇಕು ಎನ್ನುವ ಯೋಚನೆ ನಮ್ಮ ಸರಕಾರದ್ದು. ಎಲ್ಲ ಧರ್ಮದ ಮಹಿಳೆಯರಿಗೆ ಸಾಂಕೇತಿಕವಾಗಿ ಲಸಿಕೆ ನೀಡಿ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮೈಕ್ರೊ ಕಂಟೋನ್ಮೆಂಟ್ ಝೋನ್‍ಗಳನ್ನು ಹೆಚ್ಚು ಮಾಡಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಇನ್ನಷ್ಟು ಗಂಭೀರ ಯೋಚನೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ ಪ್ರಧಾನಿ ಕೊಟ್ಟಿರುವ ಸೂಚನೆ ಪಾಲನೆ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಎರಡನೇ ಅಲೆ ಮಣಿಸುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News