ಸಿಎಂ ಬಿಎಸ್‍ವೈ ಚುನಾವಣೆಯಲ್ಲಿ ಹಣ ಹಂಚಲು ವಿಜಯೇಂದ್ರರನ್ನು ಬಿಟ್ಟಿದ್ದಾರೆ: ಶಾಸಕ ಯತ್ನಾಳ್ ಆರೋಪ

Update: 2021-04-11 13:23 GMT

ಹಾವೇರಿ, ಎ. 11: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನಾಯಕತ್ವ ಗುಣವಿಲ್ಲ. ಪುತ್ರ ವ್ಯಾಮೋಹದ ಹಿನ್ನೆಲೆಯಲ್ಲಿ ಸಿಎಂ ಬಿಎಸ್‍ವೈ ಅವರು ಉಪ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ವಿಜಯೇಂದ್ರ ಅವರನ್ನು ಬಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ಇಲ್ಲಿನ ಶಿಗ್ಗಾಂವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂ. ಹಣವಿದೆ. ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ಅವರು ಲೂಟಿ ಮಾಡಿದ್ದಾರೆ. ಸದ್ಯದಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರುತ್ತದೆ. ವಿಜಯೇಂದ್ರ ವಿದೇಶದಲ್ಲಿ ಸಾವಿರಾರು ಕೋಟಿ ರೂ. ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕಟ್ಟುವ ವೇಳೆ ನಾವು ಹಣ ಹಂಚುವ ಸ್ಥಿತಿ ಇರಲಿಲ್ಲ. ಅತಿ ಕಡಿಮೆ ಹಣದಲ್ಲಿ ನಾವೆಲ್ಲ ಶಾಸಕ, ಸಂಸದರಾಗಿ ಆಯ್ಕೆಯಾಗಿದ್ದೇವೆ. ಈಗ ಯಡಿಯೂರಪ್ಪನವರ ಕಾಲದಲ್ಲಿ ಹಣ ಹಂಚುವ ಪರಿಸ್ಥಿತಿ ಬಂದಿದೆ. ಈಗ ಎಂಪಿ ಆಗಬೇಕಾದರೆ ನೂರಾರು ಕೋಟಿ ರೂ.ಖರ್ಚು ಮಾಡುವ ಪರಿಸ್ಥಿತಿ ಬಂದಿದೆ ಎಂದು ಯತ್ನಾಳ್ ಟೀಕಿಸಿದರು.

ಹದ್ದು ಮೀರಿದ ವರ್ತನೆ: ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹದ್ದು ಮೀರಿ ಮಾತನಾಡುತ್ತಿದ್ದಾರೆ. ಅದು ಅವರಿಗೆ ಸಂಬಂಧವೇ ಇಲ್ಲ. ಹೊರಗಿನವರನ್ನು ತಂದು ಅಧ್ಯಕ್ಷರನ್ನ ಮಾಡಿಕೊಳ್ಳಬೇಡಿ. ಕೆಲವರು ದೇಶ ಹಾಳು ಮಾಡುವವರು ಸೇರಿಬಿಟ್ಟಿದ್ದಾರೆ. ಇದರಿಂದ ಜನರಿಗೆ ಎಷ್ಟು ತೊಂದರೆ ಆಗುತ್ತಿದೆ. ಸಾರಿಗೆ ನೌಕರರದ್ದು ಒಂದು ಸಂಸ್ಥೆ, ಎಲ್ಲರನ್ನು ಸರಕಾರಿ ನೌಕರರನ್ನಾಗಿ ಮಾಡಿ ಎನ್ನುತ್ತಾರೆ. ಮುಂದೆ ಎಲ್ಲರಿಗೂ ಐಎಎಸ್, ಐಪಿಎಸ್ ರೀತಿ ಸಂಬಳ ನೀಡಿ ಎನ್ನುತ್ತಾರೆ. ಅದೆಲ್ಲ ಆಗುವುದಿಲ್ಲ, ನಾನೇ ಮುಖ್ಯಮಂತ್ರಿ ಆದರೂ ಆಗುವುದಿಲ್ಲ ಎಂದು ಹೇಳಿದರು.

ಕಾರ್ಮಿಕರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಸರಕಾರದಲ್ಲಿ ಇರುವವರು ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಸರಕಾರದವರು ಆರನೇ ವೇತನ ಆಯೋಗ, ಸರಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಬೇಕಿತ್ತು. ಸಂಸ್ಥೆ ಲಾಭದಲ್ಲಿ ಬಂದರೆ ಮಾಡುತ್ತೇವೆ. ಈಗ ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳಬೇಕಿತ್ತು. ಸಾರಿಗೆ ಸಂಸ್ಥೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಮೊದಲು ಅದನ್ನು ನಿಲ್ಲಿಸಬೇಕು. ವಿರೋಧ ಪಕ್ಷದವರ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಬಿಎಸ್‍ವೈ ಸರಕಾರ ನಡೆಸುತ್ತಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ನಡೆಸುತ್ತಿಲ್ಲ. ವಿಜಯೇಂದ್ರ ಮತ್ತು ಅವರ ಕುಟುಂಬದವರು ಸರಕಾರ ನಡೆಸುತ್ತಿದ್ದಾರೆ. ಯಡಿಯೂರಪ್ಪನವರು ಸಹಿ ಮಾಡುತ್ತಾರೋ ಇಲ್ಲವೋ ಸಂಶಯವಿದೆ. ವಿಜಯೇಂದ್ರರೇ ಯಡಿಯೂರಪ್ಪನವರ ಸಹಿ ಮಾಡುತ್ತಾರೆಂಬ ಅನುಮಾನವಿದೆ. ಯಡಿಯೂರಪ್ಪನವರಿಗೆ ಸಹಿ ಮಾಡಲು ಕೈ ನಡುಗುತ್ತವೆ. ವಿಜಯೇಂದ್ರ ಚಿನ್ನದ ಅಂಗಡಿಯಲ್ಲಿ ಲೆಕ್ಕ ಹಾಕಿದಂತೆ ಫೈಲ್ ಲೆಕ್ಕ ಹಾಕುತ್ತಾರೆ ಎಂದು ಯತ್ನಾಳ್ ಟೀಕಿಸಿದರು.

ಸಿಎಂ ಬದಲಾವಣೆ

ಮೇ ಎರಡರ ಒಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ. ಯತ್ನಾಳ್ ಸಿಎಂ ಆಗುತ್ತಾರೋ ಅಥವಾ ಬೇರೆಯವರು ಆ ಸ್ಥಾನಕ್ಕೇರಲಿದ್ದಾರೋ ಗೊತ್ತಿಲ್ಲ. ಅದರೆ, ಸಿಎಂ ಬದಲಾವಣೆಯಂತೂ ಖಚಿತ. ಮೇ ಎರಡರ ಮೇಲಂತೂ ಹೋಗುವುದಿಲ್ಲ'

-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News