ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ
ಬೀದರ್, ಎ. 11: ವಿಧಾನಸಭಾ ಚುನಾವಣೆಯ ಬಳಿಕ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರವಿವಾರ ಇಲ್ಲಿನ ಬಸವಕಲ್ಯಾಣ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಪ್ರಕಾಶ ಖಂಡ್ರೆ ಬಿಜೆಪಿಗೆ ಸೇರ್ಪಡೆಗೊಂಡರು. ಖಂಡ್ರೆ ಅವರು 1999ರಿಂದ 2018ರ ವರೆಗೆ ಬಿಜೆಪಿಯಲ್ಲಿ ಇದ್ದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.
2018ರಲ್ಲಿ ಬಿಜೆಪಿ ಟಿಕೆಟ್ ದೊರೆಯದ ಕಾರಣ ಮುನಿಸಿಕೊಂಡು ಜೆಡಿಎಸ್ ಸೇರಿದ್ದರು. ಜೆಡಿಎಸ್‍ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಮೂರು ವರ್ಷಗಳ ಬಳಿಕ ಮತ್ತೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದು, ಉಪ ಚುನಾವಣೆ ಸಂದರ್ಭದಲ್ಲೇ ಪ್ರಕಾಶ ಖಂಡ್ರೆ ಅವರು ಜೆಡಿಎಸ್ ತೊರೆದು ಮತ್ತೆ ಬಿಜೆಪಿ ಸೇರಿರುವುದು ವಿಶೇಷವಾಗಿದೆ.