ಮತ್ತೆ ಏರುಗತಿಯಲ್ಲಿ ಕೋವಿಡ್19: ರಾಜ್ಯದಲ್ಲಿಂದು 10 ಸಾವಿರಕ್ಕೂ ಅಧಿಕ ಪಾಸಿಟಿವ್, 40 ಮಂದಿ ಮೃತ್ಯು

Update: 2021-04-11 15:30 GMT

ಬೆಂಗಳೂರು, ಎ. 11: ರಾಜ್ಯದಲ್ಲಿ ರವಿವಾರದಂದು 10,250 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. ಒಟ್ಟು 40 ಮಂದಿ ಸೋಂಕಿಗೆ ಬಲಿಯಾಗಿದ್ದು, 2,638 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 10,65,290ಕ್ಕೆ ತಲುಪಿದ್ದು, ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 12,889ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 69,225ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

40 ಸೋಂಕಿತರು ಬಲಿ: ಬೆಂಗಳೂರು ನಗರ-27, ಬೀದರ್ 1, ಬೆಳಗಾವಿ-3, ಬೆಂಗಳೂರು ಗ್ರಾಮಾಂತರ-1, ಕಲಬುರಗಿ 2, ಮೈಸೂರು-3, ಶಿವಮೊಗ್ಗ ಮತ್ತು ವಿಜಯಪುರ ತಲಾ ಒಂದೊಂದು ಸೇರಿದಂತೆ ಒಟ್ಟು 40 ಮಂದಿ ಸೋಂಕಿನಿಂದ ಅಸುನೀಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 10,250 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 46, ಬಳ್ಳಾರಿ 103, ಬೆಳಗಾವಿ 74, ಬೆಂಗಳೂರು ಗ್ರಾಮಾಂತರ 117, ಬೆಂಗಳೂರು ನಗರ 7,584, ಬೀದರ್ 290, ಚಾಮರಾಜನಗರ 49, ಚಿಕ್ಕಬಳ್ಳಾಪುರ 64, ಚಿಕ್ಕಮಗಳೂರು 41, ಚಿತ್ರದುರ್ಗ 33, ದಕ್ಷಿಣ ಕನ್ನಡ 133, ದಾವಣಗೆರೆ 50, ಧಾರವಾಡ 150, ಗದಗ 19, ಹಾಸನ 170, ಹಾವೇರಿ 22, ಕಲಬುರಗಿ 291, ಕೊಡಗು 39, ಕೋಲಾರ 41, ಕೊಪ್ಪಳ 32, ಮಂಡ್ಯ 51, ಮೈಸೂರು 277, ರಾಯಚೂರು 103, ರಾಮನಗರ 33, ಶಿವಮೊಗ್ಗ 39, ತುಮಕೂರು 150, ಉಡುಪಿ 75, ಉತ್ತರ ಕನ್ನಡ 73, ವಿಜಯಪುರ 63 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 38 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 7,584 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 27 ಜನರು ಮೃತಪಟ್ಟಿದ್ದಾರೆ. 1,184 ಸೋಂಕಿತರು ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 4,81,982 ಕೊರೋನ ಸೋಂಕಿತರು ದೃಢಪಟ್ಟಿದ್ದು, 4,815 ಜನರು ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News