ಪಟ್ಟು ಬಿಡದ ಸಾರಿಗೆ ನೌಕರರು: ರಾಜ್ಯದೆಲ್ಲೆಡೆ ಸೋಮವಾರ ನೌಕರರು- ಕುಟುಂಬಸ್ಥರ ಧರಣಿ

Update: 2021-04-11 15:43 GMT

ಬೆಂಗಳೂರು, ಎ.11: ಆರನೇ ವೇತನ ಆಯೋಗ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 5ನೆ ದಿನ ಪೂರ್ತಿಗೊಳಿಸಿದ್ದು, ರಾಜ್ಯದೆಲ್ಲೆಡೆ ಮೊದಲ ಬಾರಿಗೆ ಬಹಿರಂಗವಾಗಿ ನೌಕರರು, ಅವರ ಕುಟುಂಬಸ್ಥರು ಧರಣಿ ನಡೆಸಲಿದ್ದಾರೆ.

ರವಿವಾರ ಇಲ್ಲಿನ ಗಾಂಧಿನಗರದ ತಮ್ಮ ಸಂಘದ ಕಚೇರಿಯಲ್ಲಿ ಕಾರ್ಮಿಕರ ಮುಖಂಡರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಎಸ್ಸಾರ್ಟಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಎ.12ರಂದು ಸಾರಿಗೆ ನೌಕರರು ಆಯಾ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಮುಂಭಾಗ ಧರಣಿ ನಡೆಸಲಿದ್ದು, ನೌಕರರ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸರಕಾರವೇ ನೀಡಿದ ಭರವಸೆ ಈಡೇರಿಸಲು ಈಗ ಮುಂದಾಗಿಲ್ಲ. ಇಂತಹ ದೊಡ್ಡ ಸಮಸ್ಯೆ ಎದುರಾದರು ಸರಕಾರ ಜಾರಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದು, ಸಾರ್ವಜನಿಕರ ಸಂಕಷ್ಟಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಇನ್ನು, ನೌಕರರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರ ಬಹಿರಂಗ ಧರಣಿ ನಡೆಸಲಿದ್ದು, ಎಷ್ಟೊಂದು ನೌಕರರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವ ಉತ್ತರ ಸರಕಾರಕ್ಕೆ ಸಿಗಲಿದೆ ಎಂದು ತಿಳಿಸಿದರು.

ನಾವು ಗೌರವಯುತವಾಗಿ ಮುಖ್ಯಮಂತ್ರಿ ಅವರಿಗೆ ಬೇಡಿಕೆ ಈಡೇರಿಸಿ ಎಂದು ಹೇಳುತ್ತೇವೆ. ನಾವು ಎಲ್ಲೂ ಬಸ್‍ಗಳಿಗೆ ಕಲ್ಲು ಹೊಡೆದಿಲ್ಲ, ಬೆಂಕಿ ಹಚ್ಚಿಲ್ಲ. ಅಲ್ಲದೆ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿದ್ದಾರೆ. ಸರಕಾರ ಇದಕ್ಕೆಲ್ಲ ಪರಿಹಾರವನ್ನು ನೀಡಬೇಕು. ಮುಷ್ಕರ ಅಂತ್ಯ ಮಾಡುವುದು ಸರಕಾರದ ಕೈಯಲ್ಲಿದೆ ಎಂದು ನುಡಿದರು.

ಎಷ್ಟು ಸಾರಿಗೆ ನೌಕರರನ್ನು ವಜಾ ಮಾಡುತ್ತಾರೆ ಮಾಡಲಿ, ಸಾರಿಗೆ ನೌಕರರು ಅಧಿಕಾರಿಗಳ ಬೆದರಿಕೆಗೆ ಹೆದರಬೇಡಿ. ಸರಕಾರ ಏನು ಮಾಡುತ್ತದೆಯೋ ಮಾಡಲಿ, ನಾವು ಯಾವುದಕ್ಕೂ ಜಗ್ಗುವುದಿಲ್ಲ. ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ ಮಾಡಿದರು.

ರಾಜ್ಯ ಸರಕಾರಕ್ಕೆ ಉಪ ಚುನಾವಣೆ ಬಗ್ಗೆ ಚಿಂತೆ ಇದೆ. ಆದರೆ, ನೌಕರರ ಸಮಸ್ಯೆ ಕಾಣಿಸುತ್ತಿಲ್ಲ. ರಾಜ್ಯ ಸರಕಾರ ಕೊಟ್ಟ ಮಾತು ಜಾರಿ ಮಾಡದೇ ತಪ್ಪು ಮಾಡುತ್ತಿದೆ. ಅಲ್ಲದೇ ಈಗಾಗಲೇ ಮಾ.16ರಂದು ಸರಕಾರಕ್ಕೆ ನೋಟಿಸ್ ಕೊಟ್ಟು, ಸಾಕಷ್ಟು ಕಾಲಾವಕಾಶವನ್ನೂ ಕೊಟ್ಟಿದ್ದೇವೆ. ಸರಕಾರದ ಮಾತುಕತೆಗಳು ವಿಫಲವಾದಾಗ ಚಳವಳಿಗಳು ಆರಂಭವಾಗಿವೆ ಎಂದು ತಿಳಿಸಿದರು.

ಸಾರಿಗೆ ನಿಗಮದ ಐಎನ್‍ಟಿಯುಸಿ ಪ್ರಧಾನ ಕಾರ್ಯದರ್ಶಿ ಬಿ.ಶೆಟ್ಟಿ ಮಾತನಾಡಿ, ನೆರೆಯ ಆಂಧ್ರ, ತೆಲಂಗಾಣ ರಾಜ್ಯದಲ್ಲಿ ಈಗಾಗಲೇ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿದ್ದಾರೆ. ಹೀಗಿರುವಾಗ, ಕರ್ನಾಟದಲ್ಲಿ ಏಕೆ ಸಾಧ್ಯವಿಲ್ಲ. ಈ ಹಿಂದೆ ಸರಕಾರವೇ 6ನೆ ವೇತನ ಶ್ರೇಣಿ ಕೊಡಲಾಗುವುದೆಂದು ಒಪ್ಪಿಕೊಂಡಿತ್ತು. ಆದರೆ, ಈಗ ಬೇರೆಯೇ ಮಾತುಗಳನ್ನು ಹೇಳುವುದು ಸರಿಯಲ್ಲ. ಸಾರಿಗೆ ನಿಗಮಗಳ ನೌಕರರ ಕುಟುಂಬಗಳು ಸಂಕಷ್ಟದಲ್ಲಿವೆ. ಸಾರಿಗೆ ಸಂಸ್ಥೆ ಕಾರ್ಮಿಕರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಎಸ್ಮಾ ತಂದರೆ ಅವರೇ ಭಸ್ಮವಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಮಿಕ ಮುಖಂಡ ವಿಜಯಕುಮಾರ್ ಮಾತನಾಡಿ, 6ನೆ ವೇತನ ಆಯೋಗ ಸಾಧ್ಯವಾಗದಿದ್ದರೆ, ಪರ್ಯಾಯವಾಗಿ ಸರಕಾರ ಏನು ಪರಿಹಾರ ನೀಡಲಿದೆ ಎನ್ನುವುದು ಬಹಿರಂಗಪಡಿಸಬೇಕು. ಅಲ್ಲದೆ, ಲಕ್ಷಾಂತರ ನೌಕರರ ಬದುಕು ಸಂಕಷ್ಟದಲ್ಲಿದೆ. ಇದರ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಚುನಾವಣೆ ಪ್ರಚಾರದಲ್ಲಿರುವುದು ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಸಾರಿಗೆ ನೌಕರರ ಮುಖಂಡರಾದ ನಾಗರಾಜು, ಚಂದ್ರಶೇಖರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಸೋಮವಾರವೂ ಸುಗಮ ಸಂಚಾರ ಸಾಧ್ಯವಿಲ್ಲ

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ಕೂಡಾ ಮುಂದುವರಿದಿದ್ದು, ರಾಜ್ಯದೆಲ್ಲೆಡೆ ಸೋಮವಾರವೂ ಸುಗಮ ಸಂಚಾರ ಸಾಧ್ಯವಿಲ್ಲ.

ಈಗಾಗಲೇ ಸಾರಿಗೆ ನಿರತ ನೌಕರರು, ಬಹಿರಂಗ ಧರಣಿಗೆ ಕರೆ ನೀಡಿರುವ ಹಿನ್ನೆಲೆ ಸೋಮವಾರ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಬಸ್ಸುಗಳ ಸಂಚಾರ ನಿರೀಕ್ಷಿತ ಮಟ್ಟಕ್ಕೆ ಸಾಧ್ಯವಾಗಿಲ್ಲ. ಪ್ರಮುಖವಾಗಿ ಯುಗಾದಿ ಹಬ್ಬಕ್ಕೆ ವಿವಿಧೆಡೆಯಿಂದ ಬಂದು, ಹೋಗಲು ಭಾರೀ ಅಡಚಣೆ ಆಗಲಿದೆ.

ರವಿವಾರ ಐದು ದಿನ ಪೂರೈಸಿದ್ದು, ಸಾರ್ವಜನಿಕರ ಸಂಚಾರಕ್ಕೆ ವ್ಯತ್ಯಯವಾಗಿದೆ. ಸರಕಾರಿ ಮತ್ತು ಖಾಸಗಿ ಬಸ್‍ಗಳು ಒಂದಷ್ಟು ಸಂಚಾರ ಆರಂಭಿಸಿವೆಯಾದರೂ ಸಂಚಾರ ಸಾಧ್ಯವಾಗಿಲ್ಲ. ಇನ್ನು, ರಾಜ್ಯದ ಬಹುತೇಕ ಬಸ್ ಘಟಕಗಳಿಂದ ಸ್ಥಳೀಯ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಸಾರಿಗೆ ನೌಕರರು ಪಟ್ಟು ಸಡಿಲಗೊಳಿಸಲಿಲ್ಲ.

ರಜಾದಿನವಾದ ರವಿವಾರವೂ ಬಸ್ ನಿಲ್ದಾಣದಿಂದಲೇ ಖಾಸಗಿ ಬಸ್, ಕ್ಯಾಬ್, ಆಟೋರಿಕ್ಷಾ, ಕ್ರೂಸರ್ ವಾಹನಗಳು ಸಂಚರಿಸಿದವು. ಬೆರಳೆಣಿಕೆಯಷ್ಟು ಸಾರಿಗೆ ಬಸ್‍ಗಳು ದೀರ್ಘ ಸಮಯದ ವರೆಗೆ ಕಾದು ಕೆಲವು ಮಾರ್ಗಗಳಲ್ಲಿ ಸಂಚರಿಸಿದವು.

ಬಸ್ಸಿನ ಕೆಳಗೆ ಮಲಗಿದ ನೌಕರ

ಮುಷ್ಕರ ನಿರತ ನೌಕರನೋರ್ವ ಬಸ್ ಕಾರ್ಯಾಚರಣೆಗೆ ವಿರೋಧ ಸೂಚಿಸಿ ಬಿಎಂಟಿಸಿ ಬಸ್‍ಗಳಿಗೆ ಅಡ್ಡಲಾಗಿ ಮಲಗಿ ವಿರೋಧ ವ್ಯಕ್ತಪಡಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2110ಕ್ಕೂ ಅಧಿಕ ಬಸ್ಸುಗಳ ಕಾರ್ಯಾಚರಣೆ

ರವಿವಾರ ರಾಜ್ಯದಲ್ಲಿ ಒಟ್ಟು 2110ಕ್ಕೂ ಅಧಿಕ ಬಸ್ಸುಗಳು ಕಾರ್ಯಾಚರಣೆ ನಡೆಸಿವೆ ಎಂದು ವರದಿಯಾಗಿದೆ.

ಢಿಕ್ಕಿ ಹೊಡೆದ ಖಾಸಗಿ ಚಾಲಕ

ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ಕೆಲವು ಬಸ್‍ಗಳ ಕಾರ್ಯಾಚರಣೆಗಾಗಿ ಖಾಸಗಿ ಬಸ್ ಚಾಲಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡಿದ್ದಾರೆ. ಇದರ ನಡುವೆ ರವಿವಾರ ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ ಬಿಎಂಟಿಸಿ ಬಸ್‍ ಚಲಾಯಿಸುತ್ತಿದ್ದ ಖಾಸಗಿ ಬಸ್ ಚಾಲಕ ಮರಕ್ಕೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬಸ್ಸಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಸಚಿವ ಲಕ್ಷ್ಮಣ ಸವದಿ ರಾಜೀನಾಮೆ ನೀಡಲಿ: ಮಾರಸಂದ್ರ ಮುನಿಯಪ್ಪ

ರಾಜ್ಯ ಸರಕಾರ ಪ್ರಮುಖ ಸಾರಿಗೆ ಖಾತೆಯನ್ನೇ ಅರ್ಥ ಮಾಡಿಕೊಳ್ಳದ ಲಕ್ಷ್ಮಣ ಸವದಿ, ಈ ಕೂಡಲೇ ತನ್ನ ಖಾತೆಗೆ ರಾಜೀನಾಮೆ ಸಲ್ಲಿಕೆ ಮಾಡಲಿ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.

ರವಿವಾರ ಇಲ್ಲಿನ ಗಾಂಧಿನಗರದ ತಮ್ಮ ಸಂಘದ ಕಚೇರಿಯಲ್ಲಿ ಕಾರ್ಮಿಕರ ಮುಖಂಡರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಷ್ಟೊಂದು ದೊಡ್ಡ ಮಟ್ಟದ ಸಮಸ್ಯೆಯಾದರೂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಯಾವುದೇ ರೀತಿಯ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಅವರಿಗೆ ಈ ಖಾತೆಯ ಬಗ್ಗೆಯೇ ಅರ್ಥವಾಗಿಲ್ಲ ಎಂದು ಅನಿಸಿದೆ. ಹಾಗಾಗಿ, ಅವರು ರಾಜೀನಾಮೆ ಸಲ್ಲಿಸಿದರೆ ಒಳ್ಳೆಯದು ಎಂದು ತಿಳಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ನಾಯಕರು, ಅವರಿಗೆ ಕಾರ್ಮಿಕರ ಸಮಸ್ಯೆ ಬಗ್ಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುತ್ತಾರೆ. ಆದರೆ, ಅಕ್ಕಿ ಮಿಲ್ ನಡೆಸುತ್ತಿದ್ದ ಇವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಗೊತ್ತಾ? ಎಂದ ಅವರು, ಮಠಗಳಿಗೆ ನೂರಾರು ಕೋಟಿ ನೀಡುವ ಯಡಿಯೂರಪ್ಪ ಅವರು ಕಾರ್ಮಿಕರಿಗೆ ಹಣ ನೀಡಲು ಆಗುವ ತೊಂದರೆಯಾದರೂ ಏನು? ಕೋವಿಡ್ ನೆಪದಲ್ಲಿ ಸಾರಿಗೆ ನೌಕರರ ಬದುಕು ಮತ್ತಷ್ಟು ಸಂಕಷ್ಟಕ್ಕೆ ತಳ್ಳಬೇಡಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News