ಕೋವಿಡ್, ಸಾರಿಗೆ ಮುಷ್ಕರದ ನಡುವೆ ಚಿಕ್ಕಮಗಳೂರಿನತ್ತ ಮುಖ ಮಾಡಿದ ಪ್ರವಾಸಿಗರು

Update: 2021-04-11 16:54 GMT

ಚಿಕ್ಕಮಗಳೂರು, ಎ.11: ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರ, ಹೆಚ್ಚುತ್ತಿರುವ ಕೊರೋನ ಸೋಂಕಿನ ನಡುವೆ ಸಾಲು ಸಾಲು ರಜಾ ದಿನಗಳ ಹಿನ್ನೆಲೆಯಲ್ಲಿ ಕಾಫಿನಾಡಿ ಪ್ರಕೃತಿ ಸೌಂದರ್ಯ ಸವಿಯುವ ಉದ್ದೇಶದಿಂದ ಜಿಲ್ಲೆಯತ್ತ ದೌಡಾಯಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ಹಾಗೂ ರವಿವಾರ ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ರಜಾದಿನಗಳನ್ನು ಕಾಫಿನಾಡಿನಲ್ಲಿ ಕಳೆಯಲು ದೂರದೂರುಗಳ ಪ್ರವಾಸಿಗರು ಖಾಸಗಿ, ಸ್ವಂತ ವಾಹನಗಳಲ್ಲಿ ಜಿಲ್ಲೆಯತ್ತ ಮುಖಮಾಡಿದ್ದಾರೆ.

ಎರಡನೇ ಶನಿವಾರದ ರಜೆ, ರವಿವಾರದ ರಜೆಯೊಂದಿಗೆ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿಯ ರಜೆಗಳು ಸಾಲಾಗಿ ಬಂದಿರುವುದರಿಂದ ಪ್ರವಾಸಿಗರು ಈ ರಜಾ ದಿನಗಳನ್ನು ಕಾಫಿನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಮುಳ್ಳಯ್ಯನಗರಿ, ದತ್ತಪೀಠ, ಕೆಮ್ಮಣಗುಂಡಿ, ಕುದುರೆಮುಖ ಮತ್ತು ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹರಿದು ಬಂದಿದ್ದಾರೆ. ಕೆಎಸ್ಸಾರ್ಟಿಸಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದ್ದು, ಬಸ್‍ ಸಂಚಾರ ಸ್ಥಗಿತಗೊಂಡಿದ್ದರೂ ಸ್ವಂತ ವಾಹನಗಳಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟಿದ್ದಾರೆ.

ರವಿವಾರ ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಪ್ರವಾಸಿಗರು ಕಾಫಿನಾಡಿಗೆ ಆಗಮಿಸಿದ್ದರೆ, 500ಕ್ಕೂ ಹೆಚ್ಚು ಕಾರುಗಳು 30 ಟಿಟಿ ವಾಹನಗಳಲ್ಲಿ ಜಿಲ್ಲೆಯ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಿದ್ದಾರೆ. ಶನಿವಾರ, ರವಿವಾರ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು. ಪ್ರವಾಸಕ್ಕೆ ಬಂದವರ ಪೈಕಿ ಕೆಲವರು ಮಾಸ್ಕ್, ಸಾಮಾಜಿಕ ಅಂತರದಂತಹ ಕೊರೋನ ಗೈಡ್‍ಲೈನ್‍ಗಳ ಬಗ್ಗೆ ಹೆಚ್ಚು ಗಮನಹರಿಸದೇ ಪ್ರವಾಸಿ ತಾಣಗಳಲ್ಲಿ ಮೈಮರೆತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ರಾಜ್ಯದ ಬಹುತೇಕ ಜಿಲ್ಲೆಗಲ್ಲಿ ಕೊರೋನ ಎರಡನೇ ಅಲೆಯ ಆರ್ಭಟ ಹೆಚ್ಚುತ್ತಿದೆ. ಕಾಫಿನಾಡಿನಲ್ಲೂ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. ಎಂದಿನಂತೆ ಆರೋಗ್ಯ ಇಲಾಖೆ ಸಿಬ್ಬಂದಿ ನಗರಕ್ಕೆ ಬಂದ ಪ್ರವಾಸಿಗರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿಯೇ ಪ್ರವಾಸಿ ಕೇಂದ್ರಕ್ಕೆ ಬಿಡುತ್ತಿದ್ದಾರೆ. ಸೋಂಕಿನ ಯಾವುದೇ ಲಕ್ಷಣವಿಲ್ಲವೆಂದು ದೃಢಪಡಿಸಿಕೊಂಡ ಬಳಕವೇ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ಬಿಡಲಾಗುತ್ತಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿತಾಣಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ ಮುನ್ಸೂಚನೆಯಿಂದ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಗರ ಸಮೀಪದ ಚೆಕ್ ಪೋಸ್ಟ್ ನಲ್ಲಿ ನಿಯೋಜಿಸಿದೆ. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿದ ನಂತರವೇ ಪ್ರವಾಸಿ ಕೇಂದ್ರಗಳಿಗೆ ಬಿಡಲಾಗುತ್ತಿದೆ.

ಬಹುತೇಕ ಪ್ರವಾಸಿಗರನ್ನು ಚೆಕ್‍ಪೋಸ್ಟ್ ಸಮೀಪದಲ್ಲಿ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗುತ್ತಿದ್ದರೆ, ಕೆಲವು ಪ್ರವಾಸಿಗರು ಈಗಾಗಲೇ ಟೆಸ್ಟ್ ಮಾಡಿಸಿರುವ ದಾಖಲೆಗಳನ್ನು ಚೆಕ್‍ಪೋಸ್ಟ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ತೋರಿಸಿ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದ ದೃಶ್ಯಗಳು ರವಿವಾರ ಕೈಮರ ಚೆಕ್‍ಪೋಸ್ಟ್ ನಲ್ಲಿ ಕಂಡು ಬಂತು. ಒಟ್ಟಾರೆ ಸಾಲು ಸಾಲು ರಜೆ ಇರುವುದರಿಂದ ಸಾರಿಗೆ ನೌಕರರ ಮುಷ್ಕರ ಮತ್ತು ಕೋವಿಡ್ ಸಾಂಕ್ರಮಿಕ ರೋಗ ಲೆಕ್ಕಿಸದೇ ಹೊರ ಜಿಲ್ಲೆಗಳ ಪ್ರವಾಸಿಗರು ಕಾಫಿನಾಡಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಜಿಲ್ಲೆಯತ್ತ ಮುಖ ಮಾಡಿದ್ದಾರೆ.

ಬೇರೆ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕೆಎಸ್ಸಾರ್ಟಿಸಿಯ ರಾಜಹಂಸದಂತಹ ಐಷರಾಮಿ ಬಸ್‍ಗಳನ್ನು ಅವಲಂಭಿಸುತ್ತಾರೆ. ಆದರೆ, ಕಳೆದ ಐದು ದಿನಗಳಿಂದ ಕೆಎಸ್ಸಾರ್ಟಿಸಿ ನೌಕರರು ಮುಷ್ಕರಕ್ಕೆ ನಡೆಸುತ್ತಿರುವುದರಿಂದ ಬಹುತೇಕ ಪ್ರವಾಸಿಗರು ಪ್ರವಾಸಿಗರು ಸ್ವಂತ ಇಲ್ಲವೇ ಬಾಡಿಗೆ ವಾಹನಗಳಲ್ಲಿ ಪ್ರವಾಸಿ ತಾಣಗಳಿಗೆ ಭೇಟಿನೀಡಿದ್ದಾರೆ.

ಜಿಲ್ಲೆಯ ಪ್ರವಾಸಿತಾಣಗಳಿಗೆ ಬಂದ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಮಾಡಿ ಪ್ರವಾಸಿ ತಾಣಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಸೂಚನೆ ನೀಡಿ ಕಳುಹಿಸಲಾಗುತ್ತಿದೆ. ರವಿವಾರ ಜಿಲ್ಲೆಗೆ ಬಂದ ಪ್ರವಾಸಿಗರಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.
- ಕೈಮರ ಚೆಕ್‍ಪೋಸ್ಟ್ ಸಿಬ್ಬಂದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News