ಸತೀಶ್ ಜಾರಕಿಹೊಳಿಯ ರಾಜಕೀಯ ಅಂತ್ಯಕ್ಕಾಗಿಯೇ ಕಾಂಗ್ರೆಸ್ ಟಿಕೆಟ್ ನೀಡಿದೆ: ನಳಿನ್ ಕುಮಾರ್

Update: 2021-04-11 17:07 GMT

ಬೆಂಗಳೂರು, ಎ. 11: ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ರಾಜ್ಯ ಮತ್ತು ಬೆಳಗಾವಿಯಲ್ಲಿ ಅತ್ಯದ್ಭುತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದರ ಫಲವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರನ್ನು ಜನರು ಅತ್ಯಧಿಕ ಮತದಿಂದ ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಅಂಗಡಿ ಅವರು ಸರಳ ಸಜ್ಜನ ರಾಜಕಾರಣಿ. ಅವರ ಅವಧಿಯಲ್ಲಿ ಬೆಳಗಾವಿ ಸ್ಮಾರ್ಟ್‍ಸಿಟಿ ಕಾಮಗಾರಿ ಮಂಜೂರಾಗಿದೆ. ಉಡಾನ್ ಯೋಜನೆಯಡಿ ಪೈಲೆಟ್‍ಗಳ ತರಬೇತಿಗೆ ಸಂಬಂಧಿಸಿ ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಕಲಬುರಗಿಗೆ ವೈಮಾನಿಕ ಶಾಲೆಯೂ ಮಂಜೂರಾಗಿದೆ. ಬೆಂಗಳೂರು ನಗರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಸುಗಮ ಸಂಚಾರದ ದೃಷ್ಟಿಯಿಂದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ರೈಲ್ವೆ ಸ್ಟೇಷನ್ ಸ್ಥಾಪಿಸಲಾಗಿದೆ. ಉಪನಗರ ಪ್ರಯಾಣಿಕರ ರೈಲು ಯೋಜನೆ ಜಾರಿಗೊಳಿಸಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಂದಾಗಿ ಮಂಗಳಾ ಅಂಗಡಿ ಗೆಲುವು ಖಚಿತ ಎಂದರು. 

ಕಾಂಗ್ರೆಸ್ ಪಕ್ಷವು ಸತೀಶ್ ಜಾರಕಿಹೊಳಿ ಅವರ ರಾಜಕೀಯ ಅಂತ್ಯಕ್ಕಾಗಿಯೇ ಅವರಿಗೆ ಬೆಳಗಾವಿಯಲ್ಲಿ ಟಿಕೆಟ್ ನೀಡಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಜೊತೆಗೂಡಿ ಈ ತಂತ್ರ ಹೆಣೆದಿದ್ದಾರೆ ಎಂದ ಅವರು, ವಿಧಾನಸಭೆಯಲ್ಲೆ ಸಮರ್ಪಕವಾಗಿ ಕೆಲಸ ಮಾಡದ ಸತೀಶ್ ಇನ್ನೂ ಲೋಕಸಭೆಯಲ್ಲಿ ಏನು ಮಾಡಿಯಾರು? ಎಂದು ಪ್ರಶ್ನಿಸಿದರು.

ಬಿಜೆಪಿ ಅನನುಭವಿ ಮಹಿಳೆಯೊಬ್ಬರನ್ನು ಕಣಕ್ಕಿಳಿಸಿದೆ. ಸಂಸತ್ತಿನಲ್ಲಿ ಅವರೇನು ಮಾಡಬಲ್ಲರು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಬೆಳಗಾವಿಯು ಕಿತ್ತೂರು ಚೆನ್ನಮ್ಮನ ನಾಡಾಗಿದೆ ಎಂದು ನೆನಪಿಸಿದರು. ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದ ಸೋನಿಯಾ ಗಾಂಧಿ, ನೆಹರೂ ನಿಧನ ನಂತರ ರಾಷ್ಟ್ರದ ಪ್ರಧಾನಿಗಳಾಗಿ ಕಾರ್ಯನಿರ್ವಹಿಸಿದ್ದ ಇಂದಿರಾ ಗಾಂಧಿ ಅನನುಭವಿ ಆಗಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್, ಯುವಮೋರ್ಚಾ ರಾಜ್ಯ ಅಧ್ಯಕ್ಷ ಸಂದೀಪ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News