ಉಚಿತ ಕನ್ನಡ ಗ್ರಂಥಾಲಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ: ರಾಜ್ಯಾದ್ಯಂತ ವ್ಯಾಪಕ ಖಂಡನೆ, ನೆರವಿನ ಮಹಾಪೂರ

Update: 2021-04-11 17:37 GMT

ಮೈಸೂರು,ಎ.11: ನಗರದ ರಾಜೀವ್ ನಗರ ಎರಡನೇ ಹಂತದಲ್ಲಿ ಸೈಯದ್ ಇಸಾಕ್ ಎಂಬುವವರು ನಡೆಸುತ್ತಿದ್ದ ಉಚಿತ ಕನ್ನಡ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟು 11 ಸಾವಿರ ಗ್ರಂಥಗಳ ಸಂಪೂರ್ಣ ನಾಶಗೊಳಿಸಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಗ್ರಂಥಾಲಯದ ಮಾಲಕ ಸೈಯದ್ ಇಸಾಕ್ ಅವರಿಗೆ ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕನ್ನಡದ ಪ್ರೇಮ ಹೊಂದಿದ್ದ ಸೈಯದ್ ಇಸಾಕ್ ರಾಜೀವ್ ನಗರ ಎರಡನೇ ಹಂತದ ಪಾರ್ಕ್ ಜಾಗದಲ್ಲಿ ಸಣ್ಣ ಶೆಡ್ ನಿರ್ಮಿಸಿ ಉಚಿತ ಕನ್ನಡ ಗ್ರಂಥಾಲಯ ನಡೆಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಬೆಂಕಿ ಇಟ್ಟು ಕುರಾನ್, ಬೈಬಲ್, ಭಗವದ್ ಗೀತೆ ಸೇರಿದಂತೆ 11 ಸಾವಿರ ಪುಸ್ತಕಗಳು ಬೆಂಕಿಗಾಹುತಿಯಾಗಿದ್ದವು. ಇದರ ವರದಿ ಮಾಧ್ಯಮದಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯದ ಅನೇಕ ಕಡೆಗಳಿಂದ ಸೈಯದ್ ಇಸಾಕ್ ಅವರಿಗೆ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ಶಾಸಕ ಝಮೀರ್ ಅಹಮದ್ 2 ಲಕ್ಷ.ರೂ. ನೀಡಿದರೆ, ಮಾಜಿ ಮೇಯರ್ ಸಂದೇಶ್ ಸ್ವಾಮಿ 5 ಸಾವಿರ, ಮತ್ತೊಬ್ಬ ಕನ್ನಡ ಪ್ರೇಮಿ 5 ಸಾವಿರ ರೂ. ನೀಡಿದ್ದಾರೆ. ಇನ್ನು ಇನ್ಫೋಸಿಸ್ ನ ಇಂಜಿನಿಯರ್ ಫತೇನ್ ಮಿಸ್ಟಾ ಅವರು ಆನ್ ಲೈನ್‍ನಲ್ಲಿ ಆರಂಭಿಸಿರುವ ಕ್ರೌಡ್‍ಫಂಡಿಂಗ್ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. 

ರವಿವಾರ ಮುಖ್ಯಮಂತ್ರಿ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಸೂಚನೆ ಮೇರೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಸುಟ್ಟುಹೋದ ಗ್ರಂಥಾಲಯದ ಗ್ರಂಥಾಲಯದ ಸ್ಥಳಕ್ಕೆ ಭೇಟಿ ನೀಡಿ ಮಾಲಕ ಸೈಯದ್ ಇಸಾಕ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಈ ವೇಳೆ ವಿಜಯೇಂದ್ರ ಅವರು ದೂರವಾಣಿ ಮೂಲಕ ಮಾತನಾಡಿ ನಿಮ್ಮ ಬೆಂಬಲಕ್ಕೆ ನಾವಿದ್ದು, ಅಲ್ಲಿ ನಿಮಗೆ ಆಗಬೇಕಾದ ಕೆಲಸಗಳನ್ನು ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಕೂಡಲೇ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.

ಇದೇ ವೇಳೆ ಸೈಯದ್ ಇಸಾಕ್ ಮಾತನಾಡಿ, ನನಗೆ ಪುಸ್ತಕವಾಗಲಿ ಮತ್ತೊಂದಾಗಲಿ ಯಾರು ಕೊಡುವುದು ಬೇಡ. ನನಗೆ ಇದೇ ಜಾಗದಲ್ಲಿ ಲೈಬ್ರರಿ ಕಟ್ಟಡ ಕಟ್ಟಿಸಿಕೊಟ್ಟೆರೆ ಸಾಕು. ನಾನು ಅವರ ಬಳಿ ಒಂದು ರೂಪಾಯಿ ಹಣವನ್ನು ಕೇಳುವುದಿಲ್ಲ. ಕನ್ನಡ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಇಲ್ಲದಿದ್ದರೆ ಈ ಸ್ಥಳದಲ್ಲೆ ಧರಣಿ ಕೂರುತ್ತೇನೆ ಎಂದು ಹೇಳಿದರು. ಇಷ್ಟೆಲ್ಲಾ ಘಟನೆ ಸಂಭವಿಸಿದ್ದರೂ ಸೈಯದ್ ಇಸಾಕ್ ರವಿವಾರ ಎಂದಿನಂತೆ 18 ಕನ್ನಡ ಪೇಪರ್ ಗಳನ್ನು ದಾರದಲ್ಲಿ ಜೋಡಿಸಿ ಓದುಗರಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಉಪಮೇಯರ್ ಅವರು ಭೇಟಿ ನೀಡಿ ಇದೇ ಜಾಗದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಅದೇ ರೀತಿ ರವಿವಾರ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಸಾಹಿತಿ ರತಿರಾವ್, ಆಮ್ ಆದ್ಮಿ ಪಾರ್ಟಿಯ ಮಾಲವಿಕ ಗುಬ್ಬಿವಾಣಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ರವಿವಾರ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. 

ಗ್ರಂಥಾಲಯ ಸ್ಥಾಪನೆಗೆ ಪ್ರಕಾಶಕರ ನೆರವು
ರಾಜೀವ್ ನಗರದ 2ನೇ ಹಂತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರು ನಿರ್ಮಿಸಿದ್ದ ಗ್ರಂಥಾಲಯ ಬೆಂಕಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಗ್ರಂಥಾಲಯ ಪುನರ್ ಸ್ಥಾಪನೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪ್ರಕಾಶಕರು ಪುಸ್ತಕ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್ ಅವರು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರಿದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್ ಮತ್ತಿತರ ಗಣ್ಯರೊಂದಿಗೆ ಏಪ್ರಿಲ್ 12 ರಂದು ಸೋಮವಾರ ಸಂಜೆ 4:00 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೂ ವಸ್ತುಸ್ಥಿತಿ ಬಗ್ಗೆ ವರದಿ ಕಳುಹಿಸಲಾಗಿದ್ದು, ಇಲಾಖೆಯ ಮೂಲಕವೂ ನೆರವು ನೀಡುವ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News