ಪ್ರಚಾರ ಗಿಟ್ಟಿಸುವ ಕೆಲಸ ಮಾಡಬೇಡಿ: ಸಚಿವ ಯೋಗೇಶ್ವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Update: 2021-04-12 11:29 GMT

ಮೈಸೂರು, ಎ.12: ಮೈಸೂರಿನಲ್ಲಿ ಹೆಲಿ ಟೂರಿಸಂ ಯಾವ ಘನಕಾರ್ಯಕ್ಕಾಗಿ ಮಾಡಬೇಕು. ಹೆಲಿ ಟೂರಿಸಂ ಹೆಸರಿನಲ್ಲಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡಬೇಡಿ ಎಂದು ಪ್ರವಾಸೋಧ್ಯಮ ಸಚಿವ ಸಿ.ಪಿ‌.ಯೋಗೇಶ್ವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ನಗರದ ಲಲಿತ್ ಮಹಲ್ ಬಳಿ ಹೆಲಿ ಟೂರಿಸಂ ಮಾಡಲು ಉದ್ದೇಶಿಸಿರುವ ಸ್ಥಳ ಪರಿಶೀಲನೆ ನಡೆಸಿದ ಅವರು ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿಗೆ ಹೆಲಿ ಟೂರಿಸಂನ ಅವಶ್ಯಕತೆ ಏನು ಎಂದು ಪ್ರಶ್ನಿಸಿದರು. ಕೆಆರ್ಎಸ್ ಬಳಿ ಡಿಸ್ನಿ ಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ, ಇದರ ಅವಶ್ಯಕತೆ ಏನು ಎಂಬುದು ಗೊತ್ತಾಗಬೇಕು. ಸುಮ್ಮನೆ ಪ್ರಚಾರಕ್ಕಾಗಿ ಇಂತಹ ಯೋಜನೆಗಳ ಬಗ್ಗೆ ಮಾತನಾಡಬಾರದು ಎಂದು ಹರಿಹಾಯ್ದರು.

ಒಂದು ಯೋಜನೆ ಜಾರಿ ಮಾಡಬೇಕಾದರೆ ಅದರ ಪ್ರಯೋಜನಗಳ ಬಗ್ಗೆ ತಿಳಿದಿರಬೇಕು. ಅದು ಬಿಟ್ಟು ಸುಮ್ಮನೆ ಪ್ರಚಾರ ಮಾಡುವುದಲ್ಲ. ಮೈಸೂರಿನಿಂದ ಕಾರವಾರ, ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ ಮತ್ತು ಬೆಳಗಾಂಗೆ ಪ್ರಯಾಣ ಆರಂಭಿಸುವುದಾಗಿ ಹೇಳಲಾಗುತ್ತಿದೆ.‌ ಕಾರವಾರಕ್ಕೆ ಹೋಗಿ ನೋಡುವಂತಹದು ಏನಿದೆ ಎಂದು ಕಿಡಿಕಾರಿದರು.

ಹೆಲಿ ಟೂರಿಸಂಗಾಗಿ ನೂರಾರು ಮರಗಳನ್ನು ಹನನ ಮಾಡುವುದು ಸರಿಯಲ್ಲ. ಈ ಸಂಬಂಧ ಸಚಿವರು ಸ್ಪಷ್ಟೀಕರಣ ನೀಡಬೇಕು. ಇವರ ಉದ್ದೇಶ ಸಾರ್ವಜನಿಕರ ಅನುಕೂಲವಾಗಿದ್ದರೆ ಮಂಡಕಳ್ಳಿ ಏರ್ ಪೋರ್ಟ್ ನಲ್ಲೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News