ಈಶ್ವರಪ್ಪ ಪೆದ್ದ, ಅವನ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲ: ಸಿದ್ದರಾಮಯ್ಯ

Update: 2021-04-12 11:36 GMT
File Photo

ಕೊಪ್ಪಳ, ಎ.12: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಅವರಿಗೆ ನಾನು ಯಾವುದೇ ರೀತಿಯಲ್ಲಿ ಅವಮಾನ ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಮಾಜಿ ಸಚಿವ ಶಿವರಾಜ ತಂಗಡಗಿ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳಾ ಅವರಿಗೆ ನಾನು ಅವಮಾನ ಮಾಡಿಲ್ಲ. ಇಷ್ಟು ದಿನ ಸುರೇಶ್ ಅಂಗಡಿಗೆ ವೋಟ್ ನೀಡಿದ್ದೀರಾ, ಈ ಬಾರಿ ಸತೀಶ್ ಜಾರಕಿಹೊಳಿಗೆ ಮತ ನೀಡಿ ಎಂದು ಕೇಳಿದ್ದೇನೆ. ಸಚಿವ ಜಗದೀಶ್ ಶೆಟ್ಟರ್ ಅವರ ಬೀಗರೆಂಬ ಕಾರಣಕ್ಕೆ ಏನಾದರೂ ಹೇಳಬಹುದು. ನನ್ನ ಹೇಳಿಕೆ ಜನರಿಗೆ ನೀಡಿದ್ದೇನೆ. ನನ್ನ ಹೇಳಿಕೆಯನ್ನು ಜನರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯವೇ ಹೊರತು ಜಗದೀಶ್ ಶೆಟ್ಟರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯವಲ್ಲ ಎಂದು ಹೇಳಿದರು.

ಸೋನಿಯಾ ಗಾಂಧಿ ಅವರು ಅನುಭವ ಇದ್ದರೂ ತಾವು ಪ್ರಧಾನಿಯಾಗದೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಇಂತಹ ತ್ಯಾಗದ ಮನೋಭಾವ ಬಿಜೆಪಿಯವರಿಗೆ ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಜಯೇಂದ್ರ ಏನ್ ಸಚಿವರಾಗಿದ್ರಾ, ಮುಖ್ಯಮಂತ್ರಿಯಾಗಿದ್ರಾ ? ಯಡಿಯೂರಪ್ಪನ ಮಗ ಅನ್ನೋದು ಬಿಟ್ಟರೆ ಅವರಿಗೆ ಏನು ಅರ್ಹತೆ ಇದೆ. ವಿಜಯೇಂದ್ರ ಯಾರು, ಅವರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಿದ್ದರಾಮಯ್ಯ ನಿರಾಕರಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪೆದ್ದ, ಅವನ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಾನು ಕಾಂಗ್ರೆಸ್ ಹೇಗೆ ಸೇರಿದೆ ಗೊತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜೆಡಿಎಸ್‍ನಿಂದ ನನ್ನನ್ನು ಹೊರಗೆ ಹಾಕಿದರು. ಒಂದು ವರ್ಷ ಅಹಿಂದ ಕಟ್ಟಿದೆ. ಆಮೇಲೆ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನನ್ನನ್ನು ಕಾಂಗ್ರೆಸ್‍ಗೆ ಆಹ್ವಾನಿಸಿದರು ಎಂದರು.

ಬಿಜೆಪಿ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಸೇರಿದೆ. ಈಶ್ವರಪ್ಪಗೆ ಇದ್ಯಾವುದು ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ವಿದೂಷಕ ಎಂದು ಟೀಕಿಸಿದ ಸಿದ್ದರಾಮಯ್ಯ, ನಿನ್ನೆ ಒಂದೇ ದಿನ 10ಸಾವಿರಕ್ಕೂ ಹೆಚ್ಚು ಕೊರೋನ ಪ್ರಕರಣಗಳು ಪತ್ತೆಯಾಗಿವೆ. ಸರಕಾರ ಬಿಗಿ ಕ್ರಮ ಕೈಗೊಂಡಿಲ್ಲ. ಸರಕಾರದ ತಪ್ಪಿನಿಂದ ಎರಡನೇ ಅಲೆ ಆರಂಭವಾಗಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News