ಸೀಡಿ ಪ್ರಕರಣ: ಸಂತ್ರಸ್ತೆಯ 'ಹನಿಟ್ರ್ಯಾಪ್' ಹೇಳಿಕೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಯುವತಿ ಪರ ವಕೀಲರು

Update: 2021-04-12 15:05 GMT

ಬೆಂಗಳೂರು, ಎ.12: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಕೆಲ ಸಾಕ್ಷ್ಯಾಧಾರಗಳನ್ನು ಸಿಟ್(ವಿಶೇಷ ತನಿಖಾ ದಳ) ತನಿಖಾಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ.

ಸೋಮವಾರ ಇಲ್ಲಿನ ಆಡುಗೋಡಿಯ ತಾಂತ್ರಿಕ ಕೊಠಡಿಗೆ ಹಾಜರಾದ ಸಂತ್ರಸ್ತ ಯುವತಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರವೊಂದು ಸೇರಿದಂತೆ ಇನ್ನಿತರೆ ಸಾಕ್ಷ್ಯಾಧಾರಗಳನ್ನು ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಆಕೆಯ ಸಹಿ ಪಡೆದ ಅಧಿಕಾರಿಗಳು ಕೆಲ ಸಮಯದ ನಂತರ ವಾಪಸ್ಸು ಕಳುಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್, ಎ.11ರಂದು ಸಿಟ್ ಅಧಿಕಾರಿಗಳು ಸಂತ್ರಸ್ತೆಗೆ ಪ್ರಕರಣ ಸಂಬಂಧ ಏನಾದರೂ ವಾಟ್ಸಾಪ್ ಚಾಟ್, ಸ್ಕ್ರೀನ್ ಶಾಟ್ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರವಿದ್ದರೆ ಸಲ್ಲಿಸಿ ಎಂದು ನೋಟಿಸ್ ಕೊಟ್ಟಿದ್ದರು. ಅದರಂತೆ ನಮ್ಮ ಕಕ್ಷಿದಾರರು ಸೋಮವಾರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ದಾಖಲಾತಿ ಸಲ್ಲಿಸಿ ತನಿಖೆಗೆ ಸಹಕರಿಸಿದ್ದಾರೆ ಎಂದರು.

ಸೆಕ್ಷನ್ 164 ರಡಿ ನ್ಯಾಯಾಲಯದಲ್ಲಿ ಮತ್ತೊಮ್ಮೆ ಯುವತಿ ಹೇಳಿಕೆ ನೀಡುವುದಿಲ್ಲ. ಈ ಹಿಂದೆ ಕೋರ್ಟ್ ನಲ್ಲಿ ನೀಡಿದ ಹೇಳಿಕೆಗೆ ಯುವತಿ ಬದ್ಧವಾಗಿದ್ದಾರೆ ಎಂದ ಅವರು, ಪ್ರಕರಣದಲ್ಲಿ ಆರೋಪಿ ಪರ ವಕೀಲರು ತುಂಬಾ ಪ್ರಭಾವ ಶಾಲಿಗಳಾಗಿದ್ದು, ಮಾಧ್ಯಮಗಳ ಮುಖಾಂತರ ಕಪೋಲಕಲ್ಪಿತ ಸುದ್ದಿ ಹರಿಬಿಟ್ಟಿದ್ದಾರೆ ಎಂದು ದೂರಿದರು.

ನ್ಯಾಯವಾದಿ ಜಗದೀಶ್ ಕೆ.ಎನ್.ಮಹದೇವ್ ಪ್ರತಿಕ್ರಿಯಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆಧಾರರಹಿತ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ ನೋಡಿ ನನಗೂ ಗಾಬರಿಯಾಗಿದೆ. ಹನಿಟ್ರ್ಯಾಪ್, 164 ಹೇಳಿಕೆ ಎಲ್ಲವೂ ಸುಳ್ಳು. ಆ ರೀತಿ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News