ಯುಗಾದಿ ಹಬ್ಬದಂದು ಸಾರಿಗೆ ನೌಕರರ ಕುಟುಂಬಸ್ಥರಿಂದ ತಟ್ಟೆ ಹಿಡಿದು ಭಿಕ್ಷಾಟನೆ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-12 15:21 GMT

ಬೆಂಗಳೂರು, ಎ.12: ತಮ್ಮ ಬೇಡಿಕೆಗಳನ್ನು ಸ್ಪಂದಿಸುವಂತೆ ರಾಜ್ಯ ಸರಕಾರ ಗಮನ ಸೆಳೆಯಲು ಸಾರಿಗೆ ಮುಷ್ಕರದ ಏಳನೇ ದಿನವಾದ ನಾಳೆ(ಎ.13) ರಾಜ್ಯದೆಲ್ಲೆಡೆ ನೌಕರರ ಕುಟುಂಬಸ್ಥರು ತಟ್ಟೆ ಹಿಡಿದು ಭಿಕ್ಷಾಟನೆ ಮಾಡಲಿದ್ದಾರೆ ಎಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸೋಮವಾರ ಸಾರಿಗೆ ನೌಕರರ ಹೋರಾಟ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಷ್ಕರ ನಿರತ ನೌಕರರ ದುಡಿಮೆಯ ಫಲವಾದ ವೇತನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿಲ್ಲ. ಜತೆಗೆ, ನಮ್ಮ ಹೋರಾಟಗಳಿಗೂ ಸ್ಪಂದಿಸುತ್ತಿಲ್ಲ. ಇದೇ ಕಾರಣದಿಂದಾಗಿ ಮಂಗಳವಾರ ಯುಗಾದಿ ಹಬ್ಬದ ದಿನದಂದು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನೌಕರರ ಕುಟುಂಬಸ್ಥರು ತಟ್ಟೆ ಹಿಡಿದು ಭಿಕ್ಷಾಟನೆ ಮಾಡಲಿದ್ದಾರೆ ಎಂದರು.

ಬೆಂಗಳೂರಿನ ಸದಾಶಿವನಗರದ ವೃತ್ತ, ಕೆಆರ್ ವೃತ್ತ ಹೀಗೆ ನಾನಾ ಕಡೆಗಳಲ್ಲಿಯೇ ಭಿಕ್ಷಾಟನೆ ಚಳವಳಿ ಮುಂದುವರಿಯಲಿದೆ ಎಂದ ಅವರು, ಬಿಜೆಪಿ ಪಕ್ಷದವರೂ ಚಂದ್ರಮಾನ ಯುಗಾದಿ ಆಚರಣೆಗೆ ವೇತನವೇ ನೀಡಿಲ್ಲವೆಂದರೆ,  ತಮ್ಮದು ಯಾವ ಸೀಮೆಹಿಂದುತ್ವ ಆಗಿದೆ. ಕ್ಷುಲ್ಲಕ ಕಾರಣಗಳಿಗೂ ಬೀದಿಗಿಳಿಯುವ ಹಿಂದೂ ಹೋರಾಟಗಾರರಿಗೆ ನೌಕರರ ಸಂಕಷ್ಟ ಕಾಣುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ1 ಲಕ್ಷ 30 ಸಾವಿರ ನೌಕರರ ಬದುಕಿನ ಪ್ರಶ್ನೆ ಇದು. ಆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಲಕ್ಷ್ಮಣ ಸವದಿ ಇತ್ತ ಗಮನ ನೀಡುತ್ತಿಲ್ಲ. ಅವರಿಗೆ ಚುನಾವಣೆಗಳೇ ಮುಖ್ಯವಾಗಿದೆ. ನಮಗೆ ಪರಿಹಾರ ದೊರೆಯುವವರೆಗೂ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News