ಬಲಪ್ರಯೋಗ ಬಿಟ್ಟು ಸಾರಿಗೆ ನೌಕರರೊಂದಿಗೆ ಸಂದಾನ ನಡೆಸಿ: ಮಾಜಿ ಸಚಿವ ರಾಮಲಿಂಗಾರೆಡ್ಡಿ

Update: 2021-04-12 16:26 GMT

ಬೆಂಗಳೂರು, ಎ. 12: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಸಾರಿಗೆ ನೌಕರರ ಮುಷ್ಕರವನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕುವ ಬದಲಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಾರಿಗೆ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಾರಿಗೆ ನೌಕರರ ಮುಷ್ಕರದ ವಿಷಯದಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೆ. ಸಾರಿಗೆ ಸಚಿವನಾಗಿ ನಾಲ್ಕು ವರ್ಷ ನಾಲ್ಕು ತಿಂಗಳು ನಾನೂ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲೂ ಮುಷ್ಕರ ನಡೆದಿತ್ತು. ಸಾಧ್ಯವಾಗಿರುವ ಬೇಡಿಕೆಗಳನ್ನು ತಕ್ಷಣ ಈಡೇರಿಸಿದ್ದೆವು. ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಗೊಂದಲಗಳಿದ್ದವು. ನಿಗಮಗಳು ಶೇ.8ರಷ್ಟು ವೇತನ ಹೆಚ್ಚಿಸಲು ಸಮ್ಮತಿಸಿದ್ದರೂ, ನೌಕರರು ಶೇ.15ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ ಮುಷ್ಕರವನ್ನು ಕೊನೆಗೊಳಿಸಲಾಯಿತು ಎಂದು ಸ್ಮರಿಸಿದರು.

ಕಳಕಳಿಯೇ ಇಲ್ಲ: ಈಗಿನ ಸಿಎಂ ಹಾಗೂ ಸಾರಿಗೆ ಇಲಾಖೆ ಸಚಿವರಿಗೆ ಯಾವುದೇ ಕಾಳಜಿ ಇಲ್ಲ. ನೌಕರರು ಮುಷ್ಕರ ಅಂತ್ಯಗೊಳಿಸಲು ಮಾತುಕತೆ ನಡೆಸಿಲ್ಲ. ಬದಲಾಗಿ ವಿಮೆ ಇಲ್ಲದ, ತೆರಿಗೆ ಕಟ್ಟದ ಬಸ್‍ಗಳನ್ನು ಓಡಿಸಲು ಅವಕಾಶ ಕೊಟ್ಟಿದ್ದಾರೆ. ನಿಗಮಗಳ ನೌಕರರನ್ನು ವಜಾಗೊಳಿಸುವುದು, ವರ್ಗಾವಣೆ ಮಾಡುತ್ತಿದ್ದಾರೆ. ವಸತಿ ಗೃಹ ಖಾಲಿ ಮಾಡಲು ಒತ್ತಡ ಹಾಕುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ರಾಮಲಿಂಗಾರೆಡ್ಡಿ ಆಕ್ಷೇಪಿಸಿದರು.

ಸಾರಿಗೆ ನೌಕರರ ಬೇಡಿಕೆ ಸಹಜ. ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ಮೊದಲೇ ಅವರ ಬೇಡಿಕೆಗಳಿಗೆ ಸ್ಪಷ್ಟವಾದ ಉತ್ತರ ನೀಡಬೇಕಿತ್ತು. ಆರನೇ ವೇತನ ಆಯೋಗ ಜಾರಿಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇಕೆ? ನಾಲ್ಕು ವರ್ಷಕ್ಕೊಮ್ಮೆ ನಿಗಮದಲ್ಲಿ ವೇತನ ಪರಿಷ್ಕರಣೆಯಾಗುತ್ತದೆ. ಅದೇ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಹೇಳಬೇಕಿತ್ತು. ಮೊದಲು ಭರವಸೆ ಕೊಟ್ಟು ಈಗ ಆಗುವುದಿಲ್ಲ ಎನ್ನುತ್ತಿರುವುದೇಕೆ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಸಾರಿಗೆ ನಿಗಮದ ನೌಕರರು ಹಠಕ್ಕೆ ಬೀಳಬಾರದು, ಮಾತುಕತೆಗೆ ಮುಂದಾಗಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕೆಂದು ಮನವಿ ಮಾಡಿದ ಅವರು, ಶೀಘ್ರಗತಿಯಲ್ಲಿ ಸಾರಿಗೆ ಮುಷ್ಕರ ಅಂತ್ಯಗೊಳಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸಾರಿಗೆ ಸಚಿವರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಬೇಕಿತ್ತು. ಈಶ್ವರಪ್ಪ ಅವರ ಇಲಾಖೆಯ ಅನುದಾನವನ್ನು ಹಂಚಿಕೆ ಮಾಡಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತದೆ. ಸಾರಿಗೆ ಸಚಿವರು ವಿಫಲರಾದಾಗ ಮಧ್ಯಪ್ರವೇಶ ಮಾಡಿ ಮಾತುಕತೆ ನಡೆಸಲು ಸಾಧ್ಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಕೋವಿಡ್ ನಿಯಂತ್ರಣದಲ್ಲೂ ಸರಕಾರ ವಿಫಲತೆ ಅನುಭವಿಸಿದೆ. ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ರಾತ್ರಿ ಕಫ್ರ್ಯೂ ಜಾರಿಗೊಳಿಸಲಾಗಿದೆ. ಕೊರೋನ ಹಗಲು ಮಲಗಿದ್ದು, ರಾತ್ರಿ ಮಾತ್ರ ಓಡಾಡಲಿದೆಯೇ? ಇದ್ಯಾವ ಸೀಮೆಯ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಕೊರೋನ ನಿಯಂತ್ರಿಸದೇ ಇರುವುದರಿಂದ ಜನ ಜೀವನ ಮತ್ತೆ ಇಕ್ಕಟ್ಟಿಗೆ ಸಿಲುಕುತ್ತಿದೆ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News