ಈ ವರ್ಷವೂ ಯುಗಾದಿ ಸಂಭ್ರಮದ ಮೇಲೆ ಕೊರೋನ ಕಾರ್ಮೋಡ

Update: 2021-04-12 16:29 GMT
ಯುಗಾದಿ ಹಿನ್ನೆಲೆ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಹೂ ಮಾರುತ್ತಿರುವ ವ್ಯಾಪಾರಿಗಳು

ಬೆಂಗಳೂರು, ಎ.12: 2020ನೆ ಸಾಲಿನಂತೆ ಈ ವರ್ಷವೂ ಜನಸಾಮಾನ್ಯರಿಗೆ ಯುಗಾದಿ ಹಬ್ಬದ ಸಂಭ್ರಮಕ್ಕೆ ಕೊರೋನ ಕಾರ್ಮೋಡ ಅಡ್ಡಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳಿಂದ ಸಾರ್ವಜನಿಕರು ಕಂಗೆಟ್ಟಿದ್ದಾರೆ.

ಕೋವಿಡ್ ಎರಡನೆ ಅಲೆಯ ತೀವ್ರತೆಯಿಂದಾಗಿ ಮಾರುಕಟ್ಟೆಗಳಲ್ಲಿ ಎಂದಿನ ಚಟುವಟಿಕೆಗಳು ಇಲ್ಲದೆ ವ್ಯಾಪಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಗ್ರಾಹಕರು ಮಾರುಕಟ್ಟೆ ಪ್ರದೇಶಗಳತ್ತ ನಿರೀಕ್ಷೆಯಂತೆ ತೆರಳುತ್ತಿಲ್ಲ. ಒಂದೆಡೆ ಕೋವಿಡ್ ಅಲೆ, ಇನ್ನೊಂದೆಡೆ ಸಾರಿಗೆ ಮುಷ್ಕರದಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿದೆ.

ಪೂಜಾ ಸಾಮಗ್ರಿಗಳು, ಬಟ್ಟೆ ಅಂಗಡಿಗಳು, ವಾಹನಗಳ ಅಂಗಡಿಗಳು, ಆಭರಣ ಮಳಿಗೆಗಳು, ಹಣ್ಣು, ಹಂಪಲು, ತರಕಾರಿ ಮಾರುಕಟ್ಟೆಗಳಲ್ಲಿಯೂ ಗ್ರಾಹಕರು ಇಲ್ಲದೆ ಅಂಗಡಿ ಮಾಲಕರು ಹೈರಾಣಾಗಿದ್ದಾರೆ. ಕಳೆದ ವರ್ಷ ಲಾಕ್‍ಡೌನ್‍ನಿಂದಾಗಿ ಅಂಗಡಿಗಳು, ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದವು. ಆದರೆ, ಈ ಬಾರಿ ಲಾಕ್‍ಡೌನ್ ಇಲ್ಲದಿದ್ದರೂ ಜನರು ಮಾರುಕಟ್ಟೆಗಳತ್ತ ತಲೆ ಹಾಕುತ್ತಿಲ್ಲ.

ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಬಸವನಗುಡಿ, ಮೆಜೆಸ್ಟಿಕ್ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಹಬ್ಬ ಹರಿದಿನಗಳಲ್ಲಿ ಕಂಡು ಬರುವ ಖರೀದಿಯ ಭರಾಟೆ ಈ ಬಾರಿ ಎಲ್ಲಿಯೂ ಕಾಣುತ್ತಿಲ್ಲ.

ಯುಗಾದಿ ಹಬ್ಬದ ಪ್ರಯುಕ್ತ ಗಣ್ಯರ ಶುಭ ಹಾರೈಕೆ: ಯುಗಾದಿ ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿ.ಎ.ಬಸವರಾಜ ಸೇರಿದಂತೆ ಇನ್ನಿತರ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.

ನೂತನ ಸಂವತ್ಸರವು ಎಲ್ಲರ ಬಾಳಿನಲ್ಲಿ ಹೊಸ ಚೇತನ, ಸುಖ- ಶಾಂತಿ, ನಿತ್ಯವೂ ನೆಮ್ಮದಿ-  ಸಮೃದ್ದಿಯನ್ನು ತರಲಿ. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗೋಣ. ನೆರೆಹೊರೆಯವರಿಗೆ ನೆರವಾಗೋಣ. ಯುಗಾದಿ ಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಗಣ್ಯರು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News