ಅಂಬೇಡ್ಕರ್, ದಲಿತರ ಅವಹೇಳನ ಖಂಡಿಸಿ ಸಕಲೇಶಪುರ ಪಟ್ಟಣ ಬಂದ್, ರಸ್ತೆ ತಡೆದು ಪ್ರತಿಭಟನೆ

Update: 2021-04-12 17:06 GMT

ಸಕಲೇಶಪುರ, ಎ.12: ಮೊಬೈಲ್ ಸಂಭಾಷಣೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ದಲಿತ ಜನಾಂಗವನ್ನು ಹೀಯಾಳಿಸಿದ್ದಾರೆಂದು ಆರೋಪಿಸಿ ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ಸಕಲೇಶಪುರ ಬಂದ್ ಯಶಸ್ವಿಯಾಗಿದೆ.

ಪಟ್ಟಣದ ಮಿನಿ ವಿಧಾನಸೌದದಿಂದ ಹೊರಟ ಪ್ರತಿಭಟನಕಾರರು ಅರೋಪಿಗಳ ವಿರುದ್ಧ ಮತ್ತು ಬಾಬ ಸಾಹೇಬರ ಪರವಾಗಿ ಘೊಷಣೆ ಕೂಗಿದರು. ಹಳೆ ಬಸ್ ನಿಲ್ದಾಣದ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಘಟನೆ ವಿವರ: ಕಳೆದ ಎರಡು ದಿನಗಳ ಹಿಂದೆ ಮೊಬೈಲ್ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಕಿಡಿಗೇಡಿಗಳು ದಲಿತ ಸಮುದಾಯ ಮತ್ತು ಸಂವಿಧಾನ ಶಿಲ್ಪಿ ಬಾಬ ಸಾಹೇಬರನ್ನು ಅತ್ಯಂತ ಕೀಳು ಮಟ್ಟದಲ್ಲಿ ಹೀಯಾಳಿಸಿದ್ದರು ಎನ್ನಲಾಗಿದೆ. ಬಳಿಕ ದಲಿತ ಮುಖಂಡರು ಅರೋಪಿಗಳ ವಿರುದ್ಧ ದೂರು ದಾಖಲಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕಾಯ್ದೆಗಳನ್ನು ಹಾಕಿ ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಆದರೆ ಪ್ರಕರಣ ದಾಖಲಿಸಿ ಮೂರು ದಿನಗಳು ಕಳೆದರೂ ಅರೋಪಿಗಳನ್ನು ಬಂಧಿಸಲು ಸಾದ್ಯವಾಗಿಲ್ಲ ಎನ್ನಲಾಗಿದ್ದು, ಹೀಗಾಗಿ ಇಂದು ಸಕಲೆಶಪುರ ಬಂದ್ ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀಲ ವೇಣುರಾವ್, ನಮ್ಮ ಹೋರಾಟ ಯಾವುದೇ ಒಂದು ಜಾತಿಯ ಅಥವಾ ವರ್ಗದ ವಿರುದ್ಧವಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ರಚಿಸುವಾಗ ಯಾವುದೇ ಒಂದು ಜಾತಿಯನ್ನು ನಿರ್ದಿಷ್ಟವಾಗಿ ಗುರುತಿಸಿ ಸಂವಿಧಾನ ಬರೆಯಲಿಲ್ಲ. ಸಾಮಾಜಿಕ ಪರಿಕಲ್ಪನೆಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸಿದ್ದಾರೆ. ಮಹಾನ್ ಮಾನವತ ವಾದಿಯ ಬಗ್ಗೆ ಅತ್ಯಂತ ಹೀನವಾಗಿ ಮಾತನಾಡಿದ್ದಲ್ಲದೆ ದಲಿತ ಸಮುದಾಯದ ಹೆಣ್ಣು ಮಕ್ಕಳ ಚಾರಿತ್ರ್ಯವನ್ನು ಪ್ರಶ್ನಿಸುವ ಮೂಲಕ ಈ ದೇಶದ ಮೂಲ ನಿವಾಸಿಗಳ ಸ್ವಾಭಿಮಾನಕ್ಕೆ ದಕ್ಕೆ ಉಂಟುಮಾಡಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಪುರಸಭೆ ಅಧ್ಯಕ್ಷ ಕಾಡಪ್ಪ, ದಲಿತ ಮುಖಂಡರಾದ ಬೈಕೆರೆ ದೇವರಾಜ್, ಲಕ್ಷ್ಮಣ್ ಕೀರ್ತಿ, ಕೋಮರಯ್ಯ, ಮೊಹನ್ ನಾಗರ, ಕಡಲೆ ಬಸವರಾಜ್, ಕುನಿಗನ ಹಳ್ಳಿ ನಿಂಗರಾಜ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾನುಬಾಳು ಭಾಸ್ಕರ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ,
ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ನಾಗಾರಾಜ್ ಹೊತ್ತೂರು, ತಾಲೂಕು ಸಂಚಾಲಕ ಜಗದೀಶ್, ಜೈ ಭೀಮ್ ಮಂಜು, ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಹಸೈನಾರ್ ಆನೆಮಹಲ್, ಸಲೀಮ್ ಕೊಲ್ಲಹಳ್ಳಿ, ಫಾರೂಖ್ ಅಸ್ಲಾಮ್, ಹೆನ್ರಿ, ನವೀನ್ ಸದಾ, ಮರಿ ಜೋಸೆಫ್, ಬಿಎಸ್ಪಿ ಮುಖಂಡ ತಮ್ಮಯ್ಯ, ವಕೀಲೆ ಕಲ್ಪನಾ ಕೀರ್ತಿ, ನಂದಿನಿ ಬನವಾಸೆ, ಗೌರಮ್ಮ, ವಲಳ ಹಳ್ಳಿ ವಿರೇಶ್, ಪುರಸಭೆ ಸದಸ್ಯ ಅಣ್ಣಪ್ಪ, ಟಿಪ್ಪು ಸಂಘದ ಝುಬೇರ್, ನವೀದ್, ಸಂದೀಪ್ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News