ಡಾ.ಅಂಬೇಡ್ಕರ್ ಹುಟ್ಟುಹಬ್ಬದ ಪ್ರಯುಕ್ತ ಎ.14ರಿಂದ ವೈವಿಧ್ಯಮಯ ಕಾರ್ಯಕ್ರಮಗಳು

Update: 2021-04-12 17:27 GMT

ಬೆಂಗಳೂರು, ಎ. 12: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರರ 130ನೆ ಹುಟ್ಟುಹಬ್ಬದ ಅಂಗವಾಗಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ, ತಾಲೂಕು ಕೇಂದ್ರದಲ್ಲಿ `ಸಂವಿಧಾನ ಉಳಿಯಲಿ-ಮನುವಾದ ಅಳಿಯಲಿ' ಘೋಷಣೆಯಡಿ ಎ.14ರಿಂದ ಎ.25ರ ವರೆಗೆ ವಿಚಾರ ಸಂಕಿರಣಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿಶೇಷವಾಗಿ ಆಚರಿಸಲಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದ್ದಾರೆ.

ದಲಿತರ ಆಶಾಕಿರಣ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನವನ್ನು ಯುಗಾದಿ ಹಬ್ಬ ಯುಗ ಪುರುಷನ ಹಬ್ಬವಾಗಿ ಆಚರಿಸಲು ನಿರ್ಧರಿಸಿದೆ. ಶತಮಾನಗಳ ಜಾತಿ ಅಸ್ಪøಶ್ಯತೆಯನ್ನು ಮನುವಾದಿ ಕಟ್ಟಳೆಗಳಿಂದ ಕಟ್ಟಿಹಾಕಿದರು. ವಿದ್ಯೆಯಿಂದ ಬಹುದೂರ ತಳ್ಳಿ, ಕಿವಿಯಿಂದ ಕೇಳಿದರೆ ಕಾದ ಎಣ್ಣೆ ಸುರಿಯುವ ಕಠೋರ ಶಿಕ್ಷೆ,. ಅಲ್ಲದೆ, ಭೂಮಿ ದಲಿತರಿಗೆ ದಕ್ಕದ ಹಾಗೆ ನೋಡಿಕೊಂಡು ಊರಾಚೆ ತಳ್ಳಿದರು. ಈ ಶೋಷಣೆ ಇಂದಿನವರೆಗೂ ನಡೆದುಕೊಂಡೇ ಬಂದಿದೆ ಎಂದು ಅವರು ದೂರಿದ್ದಾರೆ.

ಮನುವಾದಕ್ಕೆ ಬೆಂಕಿ ಹಚ್ಚಿ, ಕುಡಿಯುವ ನೀರನ್ನು ಮುಟ್ಟಿ ಐತಿಹಾಸಿಕ ಮಹಾಡ್ ಹೋರಾಟ ನಡೆಸಿದ, ದಲಿತರಲ್ಲಿ ಸ್ವಾಭಿಮಾದ ಕಿಚ್ಚು ತುಂಬಿದ ಮಹಾನ್ ಹೋರಾಟಗಾರ ಅಂಬೇಡ್ಕರ್ ಜನ್ಮದಿನ ನಾಡಿನಾದ್ಯಂತ ಆಚರಿಸುತ್ತಿದ್ದೇವೆ. ದೇಶಕ್ಕೆ ಸಂವಿಧಾನ ಬರೆದು ಸಮಾನತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಾರ್ವಭೌಮತೆ, ಜಾತ್ಯತೀತ ಹಾಗೂ ಜಾತಿ ನಿರ್ಮೂಲನೆ ಘೋಷಣೆ ಮಾಡಿದ ಸಂವಿಧಾನವನ್ನು ಮನುವಾದಿಗಳು ಬದಲಿಸುವ ಬೆದರಿಕೆ ಹಾಕುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಅಲ್ಲದೆ, ದಿಲ್ಲಿಯಲ್ಲಿ ಸಂವಿಧಾನ ಪ್ರತಿಯನ್ನು ಸುಟ್ಟಿದ್ದಾರೆ. ಅಸ್ಪೃಶ್ಯತೆ ಆಚರಣೆಗಳು, ಉತ್ತರಪ್ರದೇಶದ ಮೊನಿಷಿ ವಾಲ್ಮೀಕಿ, ವಿಜಾಪುರದಲ್ಲಿ ದಾನಮ್ಮ ಮೇಲೆ ಅತ್ಯಾಚಾರ ಇಂತಹ ಅನೇಕ ಜಾತಿ ದೌರ್ಜನ್ಯಗಳು ತೀವ್ರಗೊಳಿಸಲಾಗಿದೆ. ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಹಾಕಿದ್ದಾರೆ. ದಲಿತರ ಭೂಮಿ ಕಿತ್ತುಕೊಳಲು 3 ಕರಾಳ ಕೃಷಿ ಮಸೂದೆ ತಂದಿದ್ದಾರೆ. ದಲಿತರ ಮೇಲೆ ದೌರ್ಜನ್ಯಗಳು ಮುಂದುವರಿದಿದ್ದು, ಸಂವಿಧಾನದ ಆಶಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದರು.

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರಿಂ ಕೋರ್ಟ್ ಹೇಳುತ್ತಿದೆ. ಸಾಮಾಜಿಕ ನ್ಯಾಯ ಒದಗಿಸಬೇಕಾಗಿರುವ ಸರಕಾರ ಮೀಸಲಾತಿ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ತೀವ್ರಗೊಳಿಸುತ್ತಿದೆ. ಖಾಸಗೀಕರಣ ಜಾರಿಗೊಳಿಸುತ್ತಿರುವ ಬಿಜೆಪಿ ಮೋದಿ ಸರಕಾರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರದೆ ದಲಿತರಿಗೆ ವಂಚನೆ ಮಾಡುತ್ತಿದೆ ಎಂದರು.

ಇಂತಹ ತಂತ್ರಗಳು ಮೀಸಲಾತಿಯನ್ನು ಇಲ್ಲವಾಗಿಸುವ ನೀತಿಯು ಎದ್ದು ಕಾಣುತ್ತದೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯನ್ನು ಬಲಹೀನ ಗೊಳಿಸಲಾಗುತ್ತಿದೆ. ದಲಿತರ ಅಭಿವೃದ್ದಿಯ ಶಾಸನ ಭದ್ಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಉಪಯೋಜನೆಗಳನ್ನು ಬದಲಾಯಿಸಲಾಗುತ್ತಿದೆ. ಬಿಜೆಪಿ, ಮನುವಾದಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News