ದುಷ್ಕರ್ಮಿಗಳಿಂದ ಗ್ರಂಥಾಲಯಕ್ಕೆ ಬೆಂಕಿ ಪ್ರಕರಣ: ಸೈಯದ್ ಇಸಾಕ್ ರನ್ನು ಭೇಟಿಯಾದ ಪ್ರತಾಪ್ ಸಿಂಹ

Update: 2021-04-12 17:36 GMT

ಮೈಸೂರು,ಎ.12: ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಉಚಿತ ಗ್ರಂಥಾಲಯ ಸುಟ್ಟುಹೋದ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾನಾಗ್ ಪ್ರತ್ಯೇಕ ಭೇಟಿ ನೀಡಿ ಗ್ರಂಥಾಲಯ ಪುನರ್ ಸ್ಥಾಪನೆಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದರು.

ನಗರದ ರಾಜೀವ್ ನಗರದ ಎರಡನೆ ಹಂತದಲ್ಲಿರುವ ಸೈಯದ್ ಇಸಾಕ್ ಅವರ ಸುಟ್ಟು ಹೋಗಿರುವ ಗ್ರಂಥಾಲಯದ ಸ್ಥಳಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ, ಸೈಯದ್ ಇಸಾಕ್ ಅವರಿಗೆ ಧೈರ್ಯ ತುಂಬಿ ಇದೇ ಜಾಗದಲ್ಲಿ ಮತ್ತೆ ಗ್ರಂಥಾಲಯ ಸ್ಥಾಪಿಸಲು ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಮುಡಾ ಅಧ್ಯಕ್ಷರೊಂದಿಗೆ ಮಾತನಾಡಿ ನಿಮಗೆ ಜಾಗದ ವ್ಯವಸ್ಥೆ ಜೊತೆಗೆ ಮತ್ತೆ ಗ್ರಂಥಾಲಯ ಸ್ಥಾಪನೆ ಮಾಡಿಸಿಕೊಡುವುದಾಗಿ ಹೇಳಿದರು. ಇದೇ ವೇಳೆ ವೈಯಕ್ತಿಕವಾಗಿ 50 ಸಾವಿರ ರೂ ಗಳನ್ನು ಸೈಯದ್ ಇಸಾಕ್ ಅವರಿಗೆ ನೀಡಿದರು.

ಸಂಜೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಪುಸ್ತಕ ಪ್ರೇಮಿ ಸೈಯ್ಯದ್ ಇಸಾಕ್ ಅವರನ್ನು ಭೇಟಿಯಾಗಿ ಭಸ್ಮವಾದ ಗ್ರಂಥಾಲಯ ಇದ್ದ ಜಾಗದಲ್ಲಿ ಮುಡಾ ಸಹಯೋಗದೊಂದಿಗೆ ಹೊಸ ಗ್ರಂಥಾಲಯ ನಿರ್ಮಿಸುವುದಾಗಿ ಭರವಸೆ ನೀಡಿದರು.

ಗ್ರಂಥಾಲಯ ಇದ್ದ ಜಾಗವು ಸಿಎ ನಿವೇಶನವಾಗಿದ್ದು ಬೋರಾ ಸಂಸ್ಥೆಗೆ ಈಗಾಗಲೇ ನೀಡಲಾಗಿದೆ. ಸಂಸ್ಥೆಯ ಮನವೊಲಿಸಿ ಜಾಗವನ್ನು ಪಡೆದು ಅದೇ ಜಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗುವುದು. ಸೈಯ್ಯದ್ ಅವರ ನೋವಿಗೆ ಸ್ಪಂದಿಸಿ ಸಾರ್ವಜನಿಕರಿಂದ ಸಂಗ್ರಹವಾಗಿರುವ ಹಣವನ್ನು ಒಂದು ಪ್ರತ್ಯೇಕ ಖಾತೆಯಲ್ಲಿ ಇರಿಸಿ ಆ ಹಣದಲ್ಲಿ ಪುಸ್ತಕ, ಅಗತ್ಯ ಪರಿಕರಗಳನ್ನು ಖರೀದಿಸಲಾಗುವುದು. ಮುಡಾದಿಂದ ಜಾಗ ಪಡೆದು ಕಟ್ಟಡವನ್ನು ಪಾಲಿಕೆ ವತಿಯಿಂದ ನಿರ್ಮಿಸಿ ಗ್ರಂಥಾಲಯ ಸಮಿತಿ ರಚಿಸಿ ಅದಕ್ಕೆ ಸಯ್ಯದ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಸುತ್ತಮುತ್ತಲಿನ ನಾಗರಿಕರು ಮಾತನಾಡಿ ಸಯ್ಯದ್ ಅವರಿಗೆ ಈ ರೀತಿ ಆಗಬಾರದಿತ್ತು. ಅವರಿಗೆ ನಾವು ಖಂಡಿತ ಸಹಾಯ ಮಾಡುತ್ತೇವೆ. ನಮಗೂ ಕೂಡ ಕನ್ನಡ ಪ್ರೀತಿ ಇದೆ. ಹಾಗಾಗಿ ಪುಸ್ತಕ ಖರೀದಿ, ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News