'ಐಸಿಸಿ ತಿಂಗಳ ಆಟಗಾರ' ಪ್ರಶಸ್ತಿಗೆ ಭಾಜನರಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್

Update: 2021-04-13 12:25 GMT

ಹೊಸದಿಲ್ಲಿ, ಎ.13: ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮಂಗಳವಾರ 'ಐಸಿಸಿ ಪ್ಲೇಯರ್ ಆಫ್ ದಿ ಮಂತ್' (ಐಸಿಸಿ ತಿಂಗಳ ಆಟಗಾರ) ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಭುವನೇಶ್ವರ್ ಕುಮಾರ್ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 4.65ರ ಎಕಾನಮಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದರೆ, ಐದು ಟಿ-20 ಪಂದ್ಯಗಳಲ್ಲಿ 6.38ರ ಎಕಾನಮಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. 

ಭುವನೇಶ್ವರ್ ಈ ವರ್ಷದಲ್ಲಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಾತ್ರರಾದ ಮೂರನೇ ಭಾರತೀಯ ಆಟಗಾರ. ಜನವರಿಯಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಈ ಪ್ರಶಸ್ತಿ ಪಡೆದಿದ್ದರೆ, ಫೆಬ್ರವರಿ ತಿಂಗಳ ಪ್ರಶಸ್ತಿಯನ್ನು ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿದ್ದಕ್ಕಾಗಿ ರವಿಚಂದ್ರನ್ ಅಶ್ವಿನ್ ಪಡೆದಿದ್ದರು.

'ಅತ್ಯಂತ ನೋವಿನ ಸುದೀರ್ಘ ಬಿಡುವಿನ ಬಳಿಕ ಭಾರತದ ಪರ ಮತ್ತೆ ಆಡಲು ಸಾಧ್ಯವಾಗಿರುವುದು ಅತ್ಯಂತ ಖುಷಿ ನೀಡಿದೆ. ಈ ಸಮಯದಲ್ಲಿ ನಾನು ಫಿಟ್ನೆಸ್ ಹಾಗೂ ಕೌಶಲ್ಯ ವೃದ್ಧಿಯತ್ತ ಗಮನ ಹರಿಸಿದ್ದೆ. ದೇಶಕ್ಕಾಗಿ ಮತ್ತೆ ವಿಕೆಟ್ ಗಳಿಸಲು ಸಾಧ್ಯವಾಗಿರುವುದು ಸಂತೃಪ್ತಿಯನ್ನು ನೀಡಿದೆ' ಎಂದು ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News