ಮಸ್ಕಿ ಕ್ಷೇತ್ರದ ಮತದಾರರಿಗೆ ಹಣ ಹಂಚಿದ ಬಿಜೆಪಿ ಮುಖಂಡ: ವಿಡಿಯೋ ಟ್ವೀಟ್ ಮಾಡಿ ಕಾಂಗ್ರೆಸ್ ಆರೋಪ

Update: 2021-04-13 12:42 GMT

ರಾಯಚೂರು, ಎ.13: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ಏರುತ್ತಿದ್ದು, ಈ ನಡುವೆ ಬಿಜೆಪಿ ಮುಖಂಡರೊಬ್ಬರು ಮತದಾರರಿಗೆ ಹಣ ಹಂಚಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ.

ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ಹಣ ಹಂಚುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಮಹಿಳೆಯರು ಮತ್ತು ಮಕ್ಕಳ ಗುಂಪಿಗೆ ಹಣ ನೀಡುವ ದೃಶ್ಯ ವಿಡಿಯೋದಲ್ಲಿದೆ. ಹಣ ಸ್ವೀಕರಿಸಿದ ಬಳಿಕ ವ್ಯಕ್ತಿಯೋರ್ವರು ' ಬಿಜೆಪಿಯ ಹಣ, ಕಾಂಗ್ರೆಸ್ ಗೆ ಮತ' ಎಂದು ಹೇಳುವುದೂ ವಿಡಿಯೋದಲ್ಲಿ ಕೇಳಿಸುತ್ತದೆ.

''ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್‌ನಂತೆ! ಹಣದಿಂದ ಶಾಸಕರನ್ನೂ ಖರೀದಿಸುತ್ತದೆ, ಮತಗಳನ್ನೂ ಖರೀದಿಸುತ್ತದೆ. ಮಸ್ಕಿ ಕ್ಷೇತ್ರದ ಮತದಾರರಿಗೆ ನಂದೀಶ್ ರೆಡ್ಡಿ ಹಣ ಹಂಚಿದ ವಿಡಿಯೋ ಇದು'' ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆರೋಪಿಸಿದೆ. ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ್ದು ಜಗತ್ತಿಗೆ ತಿಳಿದರೂ ಚುನಾವಣಾ ಆಯೋಗದ ಕಣ್ಣಿಗೆ ಕಾಣಲಿಲ್ಲವೇ? ಕಂಡರೂ ಜಾಣ ಕುರುಡೇ? ಎಂದು ಚುನಾವಣಾ ಆಯೋಗವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಮಸ್ಕಿಯಲ್ಲಿ ಎಪ್ರಿಲ್ 17ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ ಗೌಡ ಪಾಟೀಲ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸನಗೌಡ ತುರವೀಹಾಳ ಕಣಕ್ಕಿಳಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪಗಳಿಗೆ ಪುಷ್ಠಿ ನೀಡುವಂತೆ ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿ ಭ್ರಷ್ಟಾಚಾರದ ಹಣದ ಹೊಳೆಯನ್ನು ಹರಿಸುತ್ತಿದೆ. ಆದರೆ ಐಟಿ, ಇಡಿ ಸಂಸ್ಥೆಗಳು ಏನು ಮಾಡುತ್ತಿವೆ?’. ‘ಭ್ರಷ್ಟಾಚಾರದ ಈ ಹಣ ಎಲ್ಲಿಂದ ಬಂತು?, ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿರುವುದೇಕೆ? ಆಡಳಿತ ಪಕ್ಷದ ಶಾಸಕರ ಈ ಆರೋಪ ಗಂಭೀರ ಎನಿಸಲಿಲ್ಲವೇ?’

-ಕಾಂಗ್ರೆಸ್ (ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News