ಸತ್ಯಾಗ್ರಹ ಮಾಡಿದರೂ ಬಗ್ಗುವುದಿಲ್ಲ ಎಂಬ ಸಿಎಂ ಹೇಳಿಕೆ ದೌರ್ಜನ್ಯದ ಪರಮಾವಧಿ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-13 14:01 GMT

ಬೆಂಗಳೂರು, ಎ.13: ಸಾರಿಗೆ ನೌಕರರ ಮುಷ್ಕರ ಕುರಿತು ರಾಜ್ಯ ಸರಕಾರ ಮೊಂಡುವಾದ ಮಾಡುವುದು ಸರಿಯಲ್ಲ ಎಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಇನ್ನೊಂದು ತಿಂಗಳು ಸತ್ಯಾಗ್ರಹ ಮಾಡಿದರೂ ನಾವು ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳುತ್ತಿರುವುದು ದೌರ್ಜನ್ಯದ ಪರಮಾವಧಿ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಬಗ್ಗೆ ಇನ್ನೊಮ್ಮೆ ಪರಿಶೀಲಿಸಲಿ. 6ನೇ ವೇತನ ಆಯೋಗದ ಜಾರಿ ನಮ್ಮ ಬೇಡಿಕೆಯಾಗಿದ್ದಿಲ್ಲ. ರಾಜ್ಯ ಸರಕಾರವೇ ನೀಡಿದ ವಾಗ್ಧಾನವಿದು. ಆಗ ಮಾತು ಕೊಟ್ಟು ಈಗ ಮೊಂಡುವಾದ ಮಾಡುವುದು ಸರಿಯಲ್ಲ ಎಂದ ಅವರು, ಸಾರಿಗೆ ನೌಕರರಿಗೆ ಯುಗಾದಿ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸರಕಾರ ನೌಕರರಿಗೆ ವೇತನ ನೀಡದೇ ಸತಾಯಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂರು: ಮಾರ್ಚ್‌ ತಿಂಗಳ ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್‌ಗಳ ವಿರುದ್ಧ ರಾಜ್ಯದಾದ್ಯಂತ ಪೊಲೀಸ್‌ ಠಾಣೆಗಳಿಗೆ ದೂರು ನೀಡಲಾಗುತ್ತದೆ. ಸಾರಿಗೆ ನೌಕರ ತಿಪ್ಪೇಸ್ವಾಮಿ ಈ ಬಗ್ಗೆ ಮೊದಲ ದೂರನ್ನು ನೀಡಲಿದ್ದಾರೆ. ಅಲ್ಲದೆ, ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ, ಚಾಲಕರ ಮೂಲಕ ಬಸ್‌ ಓಡಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಚಂದ್ರಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News