ಬಾವಿಗೆ ರಿಂಗ್ ಅಳವಡಿಸುತ್ತಿದ್ದಾಗ ಮಣ್ಣು ಕುಸಿದು ಕೇರಳ ಮೂಲದ ಕಾರ್ಮಿಕ ಮೃತ್ಯು

Update: 2021-04-13 15:20 GMT

ಚಿಕ್ಕಮಗಳೂರು, ಎ.13: ಬಾವಿ ಬದಿಯ ಮಣ್ಣು ಕುಸಿದು ಕೇರಳ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಮಂಗಳವಾರ ಜಿಲ್ಲೆಯ ಕಳಸ ಪಟ್ಟಣ ಸಮೀಪದ ಎಡೂರು ಗ್ರಾಮದಲ್ಲಿ ವರದಿಯಾಗಿದೆ.

ಮನೋಜ್ (35) ಮೃತ ವ್ಯಕ್ತಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಳಸ ಸುತ್ತಮುತ್ತ ಬಾವಿ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ಬಾವಿ ರಿಂಗ್ ಮಾಡುವ ಕಾರ್ಮಿಕರ ತಂಡದ ಸದಸ್ಯನಾಗಿದ್ದ ಮನೋಜ್ ಇತ್ತೀಚಿಗೆ ಎಡೂರು ಗ್ರಾಮದ ಕೆರೆದಿಡಿಗೆ ಎಂಬಲ್ಲಿ ಹಿರೇಬೈಲು ಗ್ರಾಪಂ ನಿಂದ ನಿರ್ಮಿಸಲಾಗುತ್ತಿದ್ದ ಬಾವಿಗೆ ರಿಂಗ್ ಅಳವಡಿಸುವ ಕೆಲಸ ಮಾಡುತ್ತಿದ್ದರು.

ನಿರ್ಮಾಣ ಹಂತದಲ್ಲಿದ್ದ ಈ ಬಾವಿ ಬಳಿ ಕೆಲಸ‌ ಮಾಡಲು ಮಂಗಳವಾರ ಮನೋಜ್ ಇತರ ಕಾರ್ಮಿಕರೊಂದಿಗೆ ಕೆರೆದಿಡಿಗೆಗೆ ತೆರಳಿ ಕೆಲಸ ಮಾಡುತ್ತಿದ್ದ ವೇಳೆ ಬಾವಿ ಬದಿಯಲ್ಲಿ ಹಾಕಿದ್ದ ಮಣ್ಣು ಕುಸಿದು ಮನೋಜ್ ಮೇಲೆ ಬಿದ್ದಿದೆ. ಈ ವೇಳೆ ಮನೊಜ್ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು, ಹಿರೇಬೈಲು ಗ್ರಾಮದ ನಾಗರಿಕರು ಕಾರ್ಮಿಕನನ್ನು ಕಳಸ ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ಮಾರ್ಗ ಮಧ್ಯೆ ಮನೋಜ್ ಮೃತಪಟ್ಟಿದ್ದಾರೆ.

ಕೇರಳದ ಮನೋಜ್ ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದು, ಅವಿವಾಹಿತನಾಗಿದ್ದ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕೇರಳಕ್ಕೆ ಕಳುಹಿಸಿಕೊಡಲಾಗಿದೆ.

ಸೋಮವಾರ ಕಳಸ ಹಿರೇಬೈಲು ಸುತ್ತಮುತ್ತ ಸುರಿದ ಮಳೆಯಿಂದಾಗಿ ಬಾವಿಯಲ್ಲಿ ನೀರು ನಿಂತು ಮಣ್ಣು ಸಡಿಲಗೊಂಡಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News