ನಾಯಕರ ಜತೆ ಚರ್ಚಿಸಿ ಸರ್ವಪಕ್ಷ ಸಭೆ ಬಗ್ಗೆ ತೀರ್ಮಾನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

Update: 2021-04-14 12:30 GMT

ಬೆಂಗಳೂರು: 'ಕೊರೊನ ವಿಚಾರವಾಗಿ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಕೇವಲ ನನ್ನ ನಿರ್ಧಾರವಲ್ಲ. ಇದು ರಾಜ್ಯದ ವಿಚಾರ. ಈ ಬಗ್ಗೆ ನಮ್ಮ ನಾಯಕರ ಕುರಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ತಮ್ಮ ಸದಾಶಿವನಗರ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ಸರ್ಕಾರ ಈವರೆಗೂ ನಮ್ಮ ಸಲಹೆ ಕೇಳಿಲ್ಲ. ಅವರ ಇಚ್ಛೆಯಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಈಗ ಸರ್ವಪಕ್ಷ ಸಭೆ ಕರೆದಿದ್ದಾರೆ. ಅವರು ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಮಗೆ ಇನ್ನು ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಕೊರೋನ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅವೈಜ್ಞಾನಿಕ ನೈಟ್ ಕರ್ಫ್ಯು ಅಗತ್ಯವಿಲ್ಲ. ಆದರೂ ಜಾರಿಗೊಳಿಸಿದ್ದಾರೆ ಎಂದರು.

ವೈಯಕ್ತಿಕವಾಗಿ ಲಾಕ್ ಡೌನ್ ವಿಚಾರದಲ್ಲಿ ಹೇಳುವುದಾದರೆ ಇದರ ಅಗತ್ಯವಿಲ್ಲ. ಜನ ಈಗಾಗಲೇ ನರಳುತ್ತಿದ್ದಾರೆ.  ಮುಂಜಾಗ್ರತೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರಿಗೆ ಈ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ ಹೀಗಾಗಿ ನೆಪ ಹುಡುಕುತ್ತಿದ್ದಾರೆ. ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರಿಗೆ ಆರ್ಥಿಕ ನೆರವನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ, ರಾಜ್ಯ ಸರ್ಕಾರ 1600 ಕೋಟಿ ಪ್ಯಾಕೇಜ್ ಘೋಷಿಸಿದರೂ ಯಾರಿಗೂ ಸಹಾಯವಾಗಿಲ್ಲ ಎಂದು ಆರೋಪಿಸಿದರು.

ಇಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಒಂದು ಭಾಗ. ನಾವೆಲ್ಲ ಸೇರಿ ಅದನ್ನು ಉಳಿಸಬೇಕಿದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಈ ದೇಶಕ್ಕೆ ಭಗವದ್ಗೀತೆ, ಕುರಾನ್, ಬೈಬಲ್ ನಂತೆ. ಅವರು ಸಂವಿಧಾನದ ಮೂಲಕ ದೇಶಕ್ಕೆ ಸಾಮಾಜಿಕ, ಶೈಕ್ಷಣಿಕವಾಗಿ ಸಮಾನತೆ ಕೊಟ್ಟಿದ್ದಾರೆ. ಜನರಲ್ಲಿ ಶಾಂತಿ, ನೆಮ್ಮದಿ ಮೂಡಿಸಲು ಭದ್ರ ಬುನಾದಿ ಹಾಕಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News