ರಾಹುಲ್ ಗಾಂಧಿ ಬಗ್ಗೆ ಅನುಕಂಪವಿದೆಯೇ ಹೊರತು ಭಯ ಇಲ್ಲ: ಸಚಿವ ಈಶ್ವರಪ್ಪ

Update: 2021-04-14 12:47 GMT

ಶಿವಮೊಗ್ಗ: ಚುನಾವಣೆ ಎಂದಾಕ್ಷಣ ಕಾಂಗ್ರೆಸ್ ಸೋಲು ಖಚಿತ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ಅನುಕಂಪವಿದೆಯೇ ಹೊರತು ಭಯ ಇಲ್ಲ ಎಂದು ಸಚಿವ ಕೆ. ಎಸ್. ಈಶ್ವರಪ್ಪ ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಬಗ್ಗೆ ಬಿಜೆಪಿಗೆ ಭಯ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಆದಿಯಾಗಿ, ಅವರ ಅಮ್ಮ, ಅಜ್ಜಿ ತಮ್ಮ ಸ್ವ ಕ್ಷೇತ್ರಗಳನ್ನು ಬಿಟ್ಟು ಏಕೆ ಬೇರೆ ಕ್ಷೇತ್ರಗಳಿಗೆ ಹೋಗಿ ಸ್ಪರ್ಧೆ ಮಾಡಿದ್ದರು ಎಂಬುದನ್ನು ನೋಡಿಕೊಳ್ಳಬೇಕಿದೆ. ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದಿಂದ ಕೇರಳಕ್ಕೆ ಏಕೆ ಹೋಗಿ ಸ್ಪರ್ಧೆ ಮಾಡಿದ್ದರು ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ರಾಜ್ಯದ ಎಲ್ಲಾ ಕಡೆ ಪ್ರಚಾರ ಮಾಡಿದ್ರು. ಆದರೂ ರಾಜ್ಯದಲ್ಲಿ 25 ಕಡೆ ಬಿಜೆಪಿ ಗೆಲುವು ಸಾಧಿಸಿತು. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಆದರೂ ಸೋಲು ಅನುಭವಿಸಿತ್ತು. ಈಗ ಖರ್ಗೆಯವರು ರಾಹುಲ್ ಗಾಂಧಿ ಸಿಂಹ ಎಂಬ ಮಾತು ಹೇಳಿದ್ದಾರೆ. ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ಎಂಬುದು ಉಪ ಚುನಾವಣೆ ಫಲಿತಾಂಶ ಬಂದ ನಂತರ ತಿಳಿಯಲಿದೆ ಎಂದರು.

ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಉಪಚುನಾವಣೆಯ 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಸುಸಂಘಟಿತವಾಗಿ, ಸಂಘಟನಾತ್ಮಕವಾಗಿ ಬೂತ್ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತವೆ. ಮಸ್ಕಿ ಹಾಗೂ ಬಸವ ಕಲ್ಯಾಣದಲ್ಲಿ ಕಾಂಗ್ರೆಸ್, ಜೆಡಿಎಸ್ ಅಬ್ಬರ ಜೋರಾಗಿದೆ. ಏನೇ ಅಬ್ಬರಿಸಿದರೂ ಸಹ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.

ಜಿಲ್ಲೆಯಲ್ಲಿ 1.62 ಲಕ್ಷ ಜನರಿಗೆ ಕೊರೋನ ಲಸಿಕೆ ನೀಡಲಾಗಿದೆ. ಇನ್ನು 5 ಲಕ್ಷ ಲಸಿಕೆ ಬೇಕಿದ್ದು, ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಮಾಡುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News