ಲಾಕ್‍ಡೌನ್ ಬೇಡ, ಸಮಸ್ಯೆಗೆ ಅದೇ ಪರಿಹಾರವಲ್ಲ: ಡಿಸಿಎಂ ಅಶ್ವತ್ಥನಾರಾಯಣ

Update: 2021-04-14 14:36 GMT

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಈಗಿನ ಸಂದರ್ಭಕ್ಕೆ ಅದು ಸರಿ ಹೊಂದುವುದೂ ಇಲ್ಲ. ಹೊರಗಿನಿಂದ ಬೆಂಗಳೂರಿಗೆ ಬರುತ್ತಿರುವ ಪ್ರತಿಯೊಬ್ಬರೂ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಬುಧವಾರ ನಗರದ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವೈಯಕ್ತಿಕವಾಗಿ ಲಾಕ್‍ಡೌನ್ ಬೇಡ ಎಂತಲೇ ಹೇಳುತ್ತೇನೆ. ಸಮಾಜದಲ್ಲಿ ಯಾರೊಬ್ಬರಿಗೂ ಲಾಕ್‍ಡೌನ್ ತಡೆದುಕೊಳ್ಳುವ ಶಕ್ತಿ ಇಲ್ಲ. ಜೀವ ಉಳಿಯುವುದರ ಜತೆಗೆ ಜೀವನವೂ ನಡೆಯಬೇಕು. ಕಳೆದ ಒಂದು ವರ್ಷದಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂದು ಎಂದು ಅವರು ಹೇಳಿದರು.

ಎಲ್ಲ ಕಡೆ ಕೋವಿಡ್ ಉಚಿತ ತಪಾಸಣೆ ನಡೆಯುತ್ತಿದೆ. ಒಂದು ನಯಾಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ. ಹೊರಗಿನಿಂದ ನಗರಕ್ಕೆ ಯಾರಾದರೂ ಬಂದರೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರೂ ಉಪೇಕ್ಷೆ ಮಾಡಬಾರದು. ಕೋವಿಡ್ ಲಕ್ಷಣಗಳೇನಾದರೂ ಕಂಡು ಬಂದರೆ ಅದನ್ನು ಕಡೆಗಣಿಸೋದು ಬೇಡ ಎಂದು ಅವರು ಮನವಿ ಮಾಡಿದರು.

ಕೋವಿಡ್ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುವ ಬದಲು ಸಂಕಷ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರು ಕೂಡ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಆ ಬಗ್ಗೆ ಅಸಡ್ಡೆ ತೋರಿಸುವುದು ಸರಿಯಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲ ಕಡೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ‘ನನಗೇನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ. ಗಟ್ಟಿಮುಟ್ಟಾಗಿದ್ದೇನೆ ಎಂಬ ಅತಿ ಆತ್ಮವಿಶ್ವಾಸ ಯಾರಿಗೂ ಬೇಡ. ಉಚಿತವಾಗಿ ಸಿಗುತ್ತಿರುವ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು’ ಎಂದು ಅವರು ಕಿವಿಮಾತು ಹೇಳಿದರು.

ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಲಾಗುತ್ತಿದೆ. ಆ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಉಚಿತ ಟೆಸ್ಟ್ ಮಾಡಲಾಗುತ್ತಿದೆ. ಯಾರಿಗೇ ಲಕ್ಷಣಗಳು ಇದ್ದರೆ ಅಂಥವರೆಲ್ಲ ತಕ್ಷಣ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಔಷಧ ಇದೆ, ಲಸಿಕೆಯೂ ಲಭ್ಯವಿದೆ. ಆಸ್ಪತ್ರೆಯಷ್ಟೇ ಅಲ್ಲದೆ ಮನೆಯಲ್ಲೂ ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯಬಹುದು ಎಂದು ಅಶ್ವತ್ಥನಾರಾಯಣ ತಿಳಿಸಿದರು

ಲಸಿಕೆ ಅಭಿಯಾನ ಉತ್ತಮ: ಲಸಿಕೆ ತಯಾರಿಕೆ ಹಾಗೂ ಅಸಿಕೆ ಅಭಿಯಾನವು ಇಡೀ ಜಗತ್ತಿನಲ್ಲಿಯೇ ನಮ್ಮ ದೇಶದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಹೆಚ್ಚು ಜನರಿಗೆ ಕ್ಷಿಪ್ರವಾಗಿ ಲಸಿಕೆ ಕೊಟ್ಟಿರುವ ಏಕೈಕ ದೇಶ ನಮ್ಮದು. ಕೋವಿಡ್ ಎರಡನೇ ಅಲೆಯ ಅಪಾಯದ ತೀವ್ರತೆ ಕಡಿಮೆ. ಆದರೆ, ವೇಗವಾಗಿ ಹರಡುತ್ತಿದೆ. ಯುವಜನರು, ಮಧ್ಯವಯಸ್ಕರಿಗೆ ಹೆಚ್ಚು ಅಪಾಯ ಕಾಣುತ್ತಿದೆ. ಕೆಲವರು ರೋಗ ಲಕ್ಷಣಗಳಿದ್ದರೂ ಸೂಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿಲ್ಲ. ಇವರಿಂದಲೇ ಹೆಚ್ಚು ಸಮಸ್ಯೆಯಾಗುತ್ತಿದೆ. ಕೋವಿಡ್ ಟೆಸ್ಟ್ ನೆಗೆಟೀವ್ ಬಂದರೂ ಯಾರೂ ಎಚ್ಚರ ತಪ್ಪಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಲಸಿಕೆ ಕೊರತೆ ಇಲ್ಲ: ಕೋವಿಡ್ ಲಸಿಕೆಯನ್ನು ರಫ್ತು ಮಾಡಿದ್ದರಿಂದಲೇ ದೇಶದಲ್ಲಿ ಕೊರತೆ ಉಂಟಾಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಡಾ.ಅಶ್ವತ್ಥನಾರಾಯಣ ತಳ್ಳಿಹಾಕಿದರು.

ಕುಮಾರಸ್ವಾಮಿ ಅವರು ಸರಿಯಾದ ಮಾಹಿತಿ ಇಲ್ಲದೆ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ಸಕಾಲಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಗ್ಧ ಜನರಿಗೆ ತಪ್ಪು ಮಾಹಿತಿ ಕೊಟ್ಟು ದಾರಿ ತಪ್ಪಿಸೋದು ಬೇಡ. ದೊಡ್ಡ ಸ್ಥಾನದಲ್ಲಿದ್ದವರು, ರಾಜ್ಯದ ಜವಾಬ್ದಾರಿ ಹೊತ್ತಿದ್ದವರು ಇಂಥ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು ಎಂದರು.

ಕೋವಿಡ್ ವಿಷಯದಲ್ಲಿ ಸರಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಲ ಕಾಲಕ್ಕೆ ಅವರ ಸಲಹೆಗಳನ್ನು ಪಡೆದಿದ್ದಾರೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪ ಸುಳ್ಳು. ಅವರು ಪೂರ್ವಗ್ರಹಪೀಡಿತರಾಗಿ ದೂರುತ್ತಿದ್ದಾರೆ. ಪ್ರತಿಯೊಂದರಲ್ಲೂ ತಪ್ಪು ಹುಡುಕುವ ಅವರು, ಸಮಸ್ಯೆಗೆ ಪರಿಹಾರ ಹೇಳುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News