ಗುರುವಾರ ಸಾರಿಗೆ ನೌಕರರಿಂದ ವಿಭಿನ್ನ ಧರಣಿ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-14 15:26 GMT

ಬೆಂಗಳೂರು, ಎ.14: ಬೇಡಿಕೆ ಈಡೇರಿಕೆ ಸಂಬಂಧ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಭರವಸೆ ನೀಡದ ಹಿನ್ನೆಲೆ ಸಾರಿಗೆ ನೌಕರರ ನೌಕರರ ಮುಷ್ಕರ 8ನೆ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ(ಎ.15) ದೀಪ ಬೆಳಗುವ ಮೂಲಕ ಧರಣಿ ನಡೆಸಲಾಗುವುದು ಎಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಬುಧವಾರ ಸಾರಿಗೆ ನೌಕರರ ಮುಷ್ಕರ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದೆ. ರಾಜ್ಯ ಸರಕಾರದ ಗಮನ ಸೆಳೆಯಲು ಗುರುವಾರ ಸಂಜೆ 6 ಗಂಟೆಯಿಂದ 7ರವರೆಗೆ ದೀಪ ಬೆಳಗುವ ಮೂಲಕ ಕರ್ನಾಟಕದಲ್ಲಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದರು.

ಶಾಸಕರ ಮನೆ ಬಳಿ ಧರಣಿ: ನಮ್ಮ ಬೇಡಿಕೆ ಈಡೇರಿಸುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಮಾತನಾಡಬೇಕೆಂದು ಕೋರಿ ಎ.16ರಂದು ಎಲ್ಲ ಶಾಸಕರ ಮನೆ ಬಳಿಯೇ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಇನ್ನು, ಯಡಿಯೂರಪ್ಪ ಅವರು ಸಾರಿಗೆ ನೌಕರರ ವಿಚಾರದಲ್ಲಿ ಸಿಟ್ಟಿನಿಂದ ಮಾತಾಡುತ್ತಿದ್ದಾರೆ. ಅಲ್ಲದೆ, ಅವರು ಮುಖ್ಯಮಂತ್ರಿಗಳು, ಕೇವಲ ಅಧಿಕಾರಿ ವರ್ಗ ಹೇಳಿರುವ ಮಾತುಗಳನ್ನು ಆಲಿಸಿ, ಪ್ರತಿಕ್ರಿಯಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು, ಸಾರಿಗೆ ನೌಕರರ ಮಾತುಗಳನ್ನೂ ಒಮ್ಮೆ ಕೇಳಿ ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಮುಳುಗಿ ಹೋಗಿದ್ದಾರೆ. ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರು ಸೇರಿದರೆ 6 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದೇವೆ, ಬಿಜೆಪಿಯವರು ಇದನ್ನು ಮರೆಯಬಾರದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ದೂರು ಸ್ವೀಕರಿಸುತ್ತಿಲ್ಲ: ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡದೇ ಇರುವ ಕಾರಣಕ್ಕೆ ಬಸ್ ಘಟಕದ ವ್ಯವಸ್ಥಾಪಕರ ಮೇಲೆ ಸಾಮೂಹಿಕ ಪೊಲೀಸ್ ದೂರು ನೀಡಲು ಯೋಜಿಸಲಾಗಿತ್ತು. ಆದರೆ, ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ, ಗುರುವಾರದಿಂದ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ದಾಖಲು ಮಾಡುತ್ತೇವೆ, ನಂತರ ಹೈಕೋರ್ಟ್‍ಗೆ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಭಿಕ್ಷಾಟನೆ ಮಾಡಿದ ನೌಕರರು: ಮಂಗಳವಾರ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು, ಬೆಂಗಳೂರಿನ ಕೆಲ ಪ್ರದೇಶಗಳು ಸೇರಿದಂತೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ನೌಕರರ ಕುಟುಂಬಸ್ಥರು, ಕೆಲ ನೌಕರರು ಭಿಕ್ಷಾಟನೆ ಮಾಡಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸಾರಿಗೆ ನೌಕರರ ಮುಷ್ಕರ ಎಂಟನೆ ದಿನವಾದ ಬುಧವಾರವೂ ಪ್ರಯಾಣಿಕರ ಪರದಾಟ ಮುಂದುವರಿದಿದೆ. ಅನಿವಾರ್ಯವಾಗಿ ಜನ ಖಾಸಗಿ ಬಸ್‍ಗಳ ಮೊರೆ ಹೋಗಿದ್ದು, ದುಪ್ಪಟ್ಟು ದರದ ಅಟಾಟೋಪ ಎಂದಿನಂತೆ ಮುಂದುವರಿದಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. 

ಸಾರಿಗೆ ನೌಕರರ ಮುಷ್ಕರ ಪರಿಣಾಮ ಎಂಟು ದಿನದಿಂದ ಒಟ್ಟು 152 ಕೋಟಿಯಷ್ಟು ನಷ್ಟ ಅನುಭವಿಸಿದೆ. ಬಸ್ ಸಂಚಾರವಿಲ್ಲದೇ ನಾಲ್ಕು ನಿಗಮಗಳ ಆದಾಯಕ್ಕೆ ಪೆಟ್ಟು ಬಿದಿದ್ದೆ ಎಂದು ತಿಳಿದುಬಂದಿದೆ.

ಕೆಎಸ್ಸಾರ್ಟಿಸಿ 70 ಕೋಟಿ ರೂ., ಬಿಎಂಟಿಸಿ-20 ಕೋಟಿ ರೂ., ಎನ್‍ಡಬ್ಲ್ಯೂಕೆಎಸ್ಸಾರ್ಟಿಸಿ 30.5 ಕೋಟಿ ರೂ., ಎನ್‍ಇಕೆಎಸ್ಸಾರ್ಟಿಸಿ 31.5 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.

ಬಸ್‍ಗಳಿಗೆ ಹಾನಿ
ಸಾರಿಗೆ ಮುಷ್ಕರದ ನಡುವೆ ಕಿಡಿಗೇಡಿಗಳ ದಾಳಿ ವೇಳೆ ಸುಮಾರು 60 ಬಸ್‍ಗಳು ಹಾನಿಗೊಂಡಿದೆ. ಎ.7ರಂದು ಆರಂಭಗೊಂಡ ಮುಷ್ಕರದ ನಂತರ ಕೆಎಸ್ಸಾರ್ಟಿಸಿಯ 34, ಬಿಎಂಟಿಸಿ 3, ಈಶಾನ್ಯ ಸಾರಿಗೆ ನಿಗಮದ 20 ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ 3 ಬಸ್‍ಗಳು ಹಾನಿಗೊಂಡಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News