ಕೋಡಿಹಳ್ಳಿ ಚಂದ್ರಶೇಖರ್ ರಿಗೆ ಕಾರ್ಮಿಕರ ಹೋರಾಟದ ಅನುಭವ ಇದ್ದಂತೆ ಕಾಣುತ್ತಿಲ್ಲ: ಆಯನೂರು ಮಂಜುನಾಥ್

Update: 2021-04-14 17:55 GMT

ಶಿವಮೊಗ್ಗ: ಕಾರ್ಮಿಕ ಹೋರಾಟದ ನೇತೃತ್ವ ವಹಿಸುವುದು ಹುಲಿ ಸವಾರಿ ಇದ್ದಂಗೆ, ಹುಲಿಯನ್ನು ರೇಗಿಸಿ ಕೆಳಗಿಳಿದರೆ ಸವಾರನನ್ನೆ ಹುಲಿ ತಿಂದು ಹಾಕುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಕೋಡಿಹಳ್ಳಿ ಚಂದ್ರಶೇಖರ್ ರಿಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ರೈತ ಹೋರಾಟದ ಅನುಭವವಿರಬಹುದು. ಆದರೆ ಕಾರ್ಮಿಕರ ಹೋರಾಟದ ಅನುಭವ ಇದ್ದಂತೆ ಕಾಣುತ್ತಿಲ್ಲ. ಕಾರ್ಮಿಕ ಕಾಯ್ದೆಗಳನ್ನು ತಿಳಿದುಕೊಂಡು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಹಿಂದೆ ಮಹರಾಷ್ಟ್ರದಲ್ಲಿ ಬಟ್ಟೆಗಿರಣಿ ಕಾರ್ಮಿಕರು 15 ತಿಂಗಳು ಇದೇ ರೀತಿ ಪಟ್ಟುಹಿಡಿದು ಪ್ರತಿಭಟನೆ ಮಾಡಿದ್ದರಿಂದ ಮಿಲ್‌ಗಳು ಬಂದಾಗಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬರಬೇಕಾಯಿತು. ಉದ್ಯೋಗ ಕಳೆದುಕೊಂಡರು ದತ್ತ ಸಾವಂತ್ ಎಂಬ ಹೋರಾಟಗಾರನ ಮಾತುಕೇಳಿ ಕಾರ್ಮಿಕರ ಭವಿಷ್ಯ ಕತ್ತಲಲ್ಲಿ ಮುಳುಗಿಹೋಯಿತು. ದತ್ತಾ ಸಾವಂತ್ ಅಂತಿಮ ಫಲಿತಾಂಶ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಬಾರದಿರಲಿ ಎಂದು ಎಚ್ಚರಿಸಿದರು.

ಪ್ರತಿಷ್ಟೆ ಮತ್ತು ಬಿಗಿ ನಿಲುವು ಬೇಡ ಹೋರಾಟದಲ್ಲಿ 2 ಹೆಜ್ಜೆ ಹಿಂದೆ ಇಡುವುದು ಕೂಡ ತಂತ್ರಗಾರಿಕೆಯ ಭಾಗವಾಗಿದೆ. ಈಗಾಗಲೇ ಸಾರಿಗೆ ನೌಕರರ 8 ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಮಾತುಕತೆಗೆ ಸಿ.ಎಂ. ಕರೆದಾಗ ಹೋಗಿ ಮಾತುಕತೆ ಮೂಲಕವೇ ಬಗೆ ಹರಿಸಿಕೊಳ್ಳುವುದು ಒಳಿತು. ನಾನು ರಾಜಕೀಯ ಪಕ್ಷದ ಶಾಸಕನಾಗಿ ಅಥವಾ ಸರ್ಕಾರದ ಪರವಾಗಿ ಮಾತನಾಡುತ್ತಿಲ್ಲ. ಕಾರ್ಮಿಕ ಹೋರಾಟದಿಂದ ಬಂದ ಕಾರಣ ಅನುಭವದ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ತಟ್ಟೆ ಲೋಟಕ್ಕೆ ಸೀಮಿತವಾಗಲಿ. ಹೋರಾಟದ ನೇತೃತ್ವ ವಹಿಸಿರುವ ನಾಯಕರು ಎಡವಿದರೆ ಕಾರ್ಮಿಕರ ಕೈಯಲ್ಲಿ ಚೊಂಬು ಕೊಡಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಕೊರೋನ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ. ಲಾಕ್‌ಡೌನ್ ಆದರೆ ಯಾರಿಗೂ ಕೆಲಸ ಇರುವುದಿಲ್ಲ, ಉದ್ಯೋಗ ಭದ್ರತೆ ಇಲ್ಲದೇ ಸಂಬಳವೂ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಲಿದೆ. ಹಾಗಾಗಿ ಪ್ರತಿಷ್ಟೆ ಕೈ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News