ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಸಾಧನೆಗಳೇನು?: ಮಾಜಿ ಸಿಎಂ ಎಚ್‍ಡಿಕೆ

Update: 2021-04-14 18:01 GMT

ಬೀದರ್, ಎ.14: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ದುಪ್ಪಟ್ಟು ಬೆಲೆ ನೀಡುತ್ತೇವೆ ಅಂತ ಹೇಳಿದ್ದರು. ಆದರೆ ಅವರು ದುಪ್ಪಟ್ಟು ಬೆಲೆಯ ಬದಲಿಗೆ ದುಪ್ಪಟ್ಟು ಖರ್ಚು ಮಾಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಡಬಿ ವಾಡಿ ಸೇರಿದಂತೆ ವಿವಿಧೆಡೆ ನಡೆದ ಬಹಿರಂಗ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿರವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ರೈತರ ಪರ ಯೋಜನೆಗಳನ್ನು ಜಾರಿಗೆ ತರುತ್ತೇವೆ ಅಂತ ಹೇಳಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಡಿಸೇಲ್, ಪೆಟ್ರೋಲ್, ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿರುವ ಬಡಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಸರಕಾರಕ್ಕೆ ನೀವು ಬೆಂಬಲ ನೀಡಬೇಕೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಹೇಗೆ ಅಧಿಕಾರಕ್ಕೆ ಬಂತು ಎಂಬುದರ ಬಗ್ಗೆ ನಾನು ಈಗ ಮಾತಾಡುವುದಿಲ್ಲ. ಅಧಿಕಾರಕ್ಕೆ ಬಂದು ಅವರು ಏನು ಸಾಧಿಸಿದ್ದಾರೆ. ಯಾರಿಗೆ ಒಳ್ಳೆಯದು ಮಾಡಿದ್ದಾರೆ? ಎಷ್ಟು ಜನಪರ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದಾರೆಂದು ಪ್ರಶ್ನಿಸಿದರು.

ಕೊರೋನ ಸಂದರ್ಭದಲ್ಲಿ ಸರಕಾರ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಅವರೆಲ್ಲರೂ ಚುನಾವಣೆಯಲ್ಲಿ ತಲ್ಲೀನರಾಗಿದ್ದಾರೆ. ಅವರಿಗೆ ಜನರ ರಕ್ಷಣೆಯ ಬಗ್ಗೆ ಕಾಳಜಿ ಇಲ್ಲ. ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿಲ್ಲ. ಈ ಸರಕಾರದ ಕಳೆದ ಎರಡು ವರ್ಷಗಳ ಅವಧಿಯಲ್ಲಿ 17 ಉಪಚುನಾವಣೆಗಳು ನಡೆದಿವೆ. ನಾನು ಮಸ್ಕಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಹಾಕಿಲ್ಲ. ಆದರೆ ಬಸವಕಲ್ಯಾಣದಲ್ಲಿ ಅಭ್ಯರ್ಥಿಯನ್ನ ಹಾಕಿದ್ದಿನಿ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್, ಕುಮಾರಸ್ವಾಮಿ ರವರು 2006ರಲ್ಲಿ ರೈತರು ಸಂಕಷ್ಟದಲ್ಲಿದ್ದಂತ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಿದ್ದರು. ಆಗ ನಾನು ಕೃಷಿ ಸಚಿವನಾಗಿದ್ದೆ, ಮತ್ತೆ 2018ರಲ್ಲಿ ಸಿಎಂ ಆಗಿದ್ದಾಗ ಕೂಡ ರೈತರ ಸಾಲಮನ್ನಾ ಮಾಡಿದ್ದರು. ಅವರು ರೈತರ, ಬಡವರ, ಶ್ರಮಿಕರ ಪರ ಕಾಳಜಿ ಇರುವಂತ ನಾಯಕರು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಬೋಜೆಗೌಡ, ರಮೇಶ್‍ಗೌಡ, ಮುಖಂಡರಾದ ತಿಮ್ಮಯ್ಯ ಪುರ್ಲೆ, ನಾಸಿರ್ ಹುಸೇನ್, ಕೃಷ್ಣ ರೆಡ್ಡಿ ಸೇರಿದಂತೆ ಅನೇಕರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News