ಪೊಲೀಸ್ ಸಿಬ್ಬಂದಿಯನ್ನು ಕಾಂಗ್ರೆಸ್ ಸರಕಾರ ದಮನಿಸಿದ್ದನ್ನು ಜನತೆ ಮರೆತಿಲ್ಲ: ಬಿಜೆಪಿ

Update: 2021-04-14 18:06 GMT

ಬೆಂಗಳೂರು, ಎ.14: ಸಿದ್ದರಾಮಯ್ಯ ಅವರೇ, ನಿಮ್ಮದೇ ಕಾಂಗ್ರೆಸ್ ಸರಕಾರ ಇದ್ದಾಗ ಪೊಲೀಸರೆ ಸರಕಾರದ ವಿರುದ್ಧ ದಂಗೆ ಎದ್ದಿದ್ದರು. ರಾಜ್ಯದ ಇತಿಹಾಸದಲ್ಲೆ ಅದೊಂದು ಕಪ್ಪು ಚುಕ್ಕೆ. ಕೆಳ ಹಂತದ ಪೊಲೀಸ್ ಸಿಬ್ಬಂದಿಯನ್ನು ನೀವು ದಮನಿಸಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸಿ ನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಟೀಕಿಸಿದೆ.

ವಿಫಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ರೈತರ ಆತ್ಮಹತ್ಯಾ ಪ್ರಕರಣದ ಮೆರವಣಿಗೆಯೇ ನಡೆದಿತ್ತು. ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದೀರಿ. ನವಲಗುಂದದಲ್ಲಿ ರೈತರ ಮೇಲೆ ಮಾರಣಾಂತಿಕ ಲಾಠಿ ಚಾರ್ಜ್ ಮಾಡಿದ್ದು ಮರೆತು ಹೋಯಿತೇ? ಎಂದು ಬಿಜೆಪಿ ಟ್ವೀಟ್‍ನಲ್ಲಿ ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರೇ, ಡಿ.ಕೆ.ರವಿ ನಿಗೂಢ ಸಾವು, ಡಿವೈಎಸ್ಪಿ ಗಣಪತಿ ಸಾವು, ಪರೇಶ್ ಮೇಸ್ತಾ ಕಗ್ಗೊಲೆ ಸಂದರ್ಭದಲ್ಲಿ ನೊಂದವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ನೀವು ತೋರಿರಲಿಲ್ಲ. ಈಗ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪರ ವಕಾಲತ್ತು ವಹಿಸುತ್ತಿರುವುದೇಕೆ? ಎಂದು ಬಿಜೆಪಿ ಕೇಳಿದೆ.

ಪಶ್ಚಿಮ ಬಂಗಾಳದ ಟಿಎಂಸಿ ಅಭ್ಯರ್ಥಿಯೋರ್ವರು ದಲಿತ ಬಂಧುಗಳನ್ನು ಭಿಕ್ಷುಕರು ಎಂದು ನಿಂದಿಸಿದ್ದಾರೆ. ಮಹಾಘಟಬಂಧನ ಎಂದು ಮಮತಾ ಬ್ಯಾನರ್ಜಿಯ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದು ಸಮ್ಮತವೇ? ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು ಈಗೇಕೆ ಮೌನ ವಹಿಸಿದ್ದಾರೆ? ಎಲ್ಲಿದ್ದಾರೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತವೆ. ಕಂಬಾಲಪಲ್ಲಿ ಹತ್ಯಾಕಾಂಡ ನಡೆದಾಗ ರಾಜ್ಯ ಗೃಹ ಸಚಿವರಾಗಿದ್ದದ್ದು ಯಾರು ಎಂಬುದನ್ನು ನೆನಪಿಸಿಕೊಳ್ಳಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೇ, ನಿಮಗೆ ಮತಕ್ಕಾಗಿ ಮಾತ್ರ ದಲಿತರು ಬೇಕೇ? ಅಖಂಡಗೆ ಏಕೆ ಇನ್ನೂ ನ್ಯಾಯ ಒದಗಿಸಲಿಲ್ಲ? ಎಂದು ಬಿಜೆಪಿ ಕಿಡಿಗಾರಿದೆ.

ಕಾಂಗ್ರೆಸ್ ಪಕ್ಷಕ್ಕೆ ಕಾಮಾಲೆ ರೋಗ ಬಾಧಿಸುತ್ತಿದೆ. ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ, ಚಿದಂಬರಂ, ಡಿ.ಕೆ.ಶಿ, ಖರ್ಗೆ ಅವರ ಖಜಾನೆ ತುಂಬಿದ್ದು ಹೇಗೆ ಎಂದು ಪ್ರಶ್ನಿಸುವ ಧೈರ್ಯವನ್ನು ಕಾಂಗ್ರೆಸ್ ಪಕ್ಷ ತೋರಬೇಕು. ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ!? ಎಂದು ಬಿಜೆಪಿ ಕೇಳಿದೆ.

ಕನಕಪುರದಲ್ಲಿ ಕಳ್ಳ ವಹಿವಾಟು ನಡೆಸುತ್ತಿದ್ದ ಭ್ರಷ್ಟಾಚಾರ ಆರೋಪಿಯ ಘೋಷಿತ ಆಸ್ತಿಯೇ 840 ಕೋಟಿ. 2013 ರಿಂದ 2018ರ ಅವಧಿಯಲ್ಲಿ ತನ್ನ ಆಸ್ತಿ 600 ಕೋಟಿ ರೂ.ವೃದ್ಧಿಸಿದೆ ಎಂದು ಮಹಾನಾಯಕ ಹೇಳಿಕೊಂಡಿದ್ದರು. ಇಂಧನದಲ್ಲಿ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ ಎಂದು ಕನಕಪುರದ ಮಹಾನಾಯಕನ ಪ್ರಶ್ನಿಸಿ ಕಾಂಗ್ರೆಸ್ ಎಂದು ಬಿಜೆಪಿ ಹೇಳಿದೆ.

ಮಜವಾದಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 600 ಕೋಟಿ ರೂ. ಸಂಪತ್ತು ಹೆಚ್ಚಾಗಿದೆ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿಕೊಂಡಿದ್ದರು. ಹಾಗಾದರೆ ಉಳಿದ ಕುಖ್ಯಾತರಾದ ಜಾರ್ಜ್, ಮಹಾದೇವಪ್ಪ, ಎಂ.ಬಿ.ಪಾಟೀಲ್ ಮೊದಲಾದವರ ಲೂಟಿ ಎಷ್ಟು? ಎಂಎಲ್‍ಸಿ ಗೋವಿಂದರಾಜ್ ಐಟಿ ಡೈರಿಯನ್ನು ಒಮ್ಮೆ ಬಿಚ್ಚಿಸಿಡುವಿರಾ ಕಾಂಗ್ರೆಸ್ ಎಂದು ಬಿಜೆಪಿ ಆಗ್ರಹಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News