ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ದೇಶದ ಭದ್ರ ಬುನಾದಿ: ವಿಪ ಉಪಸಭಾಪತಿ ಪ್ರಾಣೇಶ್

Update: 2021-04-14 18:08 GMT

ಚಿಕ್ಕಮಗಳೂರು, ಎ.14: ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶ ಕಂಡ ಮಹಾನ್ ಚೇತನ ಅಂಬೇಡ್ಕರ್ ಅವರ ಕಲ್ಪನೆ ಆಲೋಚನೆಗಳು ದೇಶದ ಭವಿಷ್ಯದ ಭದ್ರ ಬುನಾದಿಯಾಗಿದೆ ಎಂದು ವಿಧಾನ ಪರಿಷತ್  ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜಾನಂಗವನ್ನು ಅಸಮಾನತೆಯಿಂದ ಸಮಾನತೆಯ ಕಡೆಗೆ ಕೊಂಡೊಯ್ಯಲು ಹಾಗೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಟ ಮಾಡಿದ್ದಾರೆ. ಅವರ ಪ್ರಮಾಣಿಕ ಹೋರಾಟಗಳು ಅವರನ್ನು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿದೆ. ಇಂತಹ  ಮಹಾನ್ ವ್ಯಕ್ತಿಗಳನ್ನು ಮಾರ್ಗದರ್ಶಕರಾಗಿಟ್ಟುಕೊಂಡು ಅವರು ನಡೆದು ಬಂದ ದಾರಿಯಲ್ಲಿ ನಾವೆಲ್ಲರು ಸಾಗಿದರೆ ದೇಶದ ಏಳಿಗೆ ಸಾಧ್ಯ ಎಂದರು.

ಮಹಾನ್ ಚೇತನರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅವರ ವಿಚಾರಧಾರೆಗಳು ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ಸಮಾಜಕ್ಕೆ ನೀಡಬೇಕು ಎಂದ ಅವರು, ಅಂಬೇಡ್ಕರ್ ಅವರು ದೇಶದ ಭವಿಷ್ಯದ ದೃಷ್ಟಿಯಿಂದ ರಚಿಸಿದ ಸಂವಿಧಾನದ ಕಾರಣದಿಂದಾಗಿ ನಾವುಗಳು ಇಂದು ವಿವಿಧ ಜವಾಬ್ದಾರಿಗಳನ್ನು ಹೊತ್ತು ಕಾರ್ಯನಿರ್ವಹಿಸುತ್ತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಅವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವುದು ಹಾಗೂ ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವ, ದೇಶದ ಏಳಿಗೆ, ಜನ ಸಾಮಾನ್ಯರ ಉದ್ಧಾರ, ಎಲ್ಲರಿಗೂ ಶಿಕ್ಷಣ ನೀಡುವಂತಹ ದೂರದೃಷ್ಟಿಯ ಅಂಶಗಳನ್ನು ಸಂವಿಧಾನದಲ್ಲಿ ಅಡಕ ಮಾಡಿ ಈದೇಶದ ವ್ಯವಸ್ಥೆಗೊಂದು ನಿರ್ದಿಷ್ಟ ಗುರಿ ತೋರಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ  ಅವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಸ್ವಾತಂತ್ರ್ಯ ನಂತರದಲ್ಲಿ  ದೇಶದ ವಿಭಜನೆಯನ್ನು ವಿರೋಧಿಸಿದವರಲ್ಲಿ ಅಂಬೇಡ್ಕರ್ ಅವರು ಪ್ರಮುಖರಾಗಿದ್ದಾರೆ. ಸ್ವಾತಂತ್ರ್ಯ ಬಂದು 74 ವರ್ಷ ಕಳೆದರು ಇಂದಿಗೂ ಕೂಡ ಪ್ರಬಲ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ, ವಿವಿಧತೆಯಲ್ಲಿ ವೈವಿಧ್ಯತೆಯನ್ನು ಒಳಗೊಂಡು ಏಕತೆಯನ್ನು ಮೈಗೂಡಿಸಿಕೊಂಡ ದೇಶ ಭಾರತ. ಇಂತಹ ದೇಶ ಮುಂದೆ ಸಾಗಲು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವಂತಹ ಸಂವಿಧಾನವು ಭದ್ರ ಬುನಾದಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕ, ಮೂಕನಾಯಕ ಎಂದು ಬಿಂಬಿಸಿದರೆ ಅವರ ವ್ಯಕ್ತಿತ್ವಕ್ಕೆ ಬಗೆಯುವ ಅಪಚಾರವಾಗುತ್ತದೆ. ಬದಲಾಗಿ ಇಡಿ ಜನಾಂಗಕ್ಕೆ ಅಂಬೇಡ್ಕರ್ ಮಹನಾಯಕರಾಗಿದ್ದಾರೆ ಎಂದ ಅವರು, ಅಸ್ಪøಶ್ಯತೆ, ಜಾತಿ ವ್ಯವಸ್ಥೆ ಸಮಾಜದಲ್ಲಿ ಶಾಪವಾಗಿ ಕಾಡುತ್ತಿದೆ ಎಂದ ಅವರು, ಸಮಾಜದ ಏಳಿಗೆಯ ಕನಸು ಕಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆಯ ವಿರುದ್ಧ ದ್ವನಿ ಎತ್ತಿ ಸಮಾಜವನ್ನು ತಿದ್ದುವ ಮೂಲಕ ಭವ್ಯ ಭಾರತ ನಿರ್ಮಿಸಿದ ಮಾಹಾನ್ ಚೇತನ ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ವಿದೇಶಿ ನೆಲದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದವರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು  ಮೊದಲಿಗರಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು 1935ರಲ್ಲಿ ಆರ್.ಬಿ.ಐ ಸ್ಥಾಪನೆಗೆ ಬೇಕಾದ ಸೂತ್ರಗಳನ್ನು ಪ್ರತಿಪಾದನೆ ಮಾಡಿದವರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ  ಜೀವನ ಎಲ್ಲರಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳು ಉತ್ತಮವಾದ  ಗುರಿಯನ್ನು ಇಟ್ಟುಕೊಂಡು ಅಂಬೇಡ್ಕರ್ ಜೀವನವನ್ನು ಮಾದರಿಯಾಗಿಟ್ಟುಕೊಂಡಲ್ಲಿ ಎಂತಹ ಗುರಿಯನ್ನಾದರೂ ಸಾಧಿಸಬಹುದು ಎಂದರು.

ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮೈಸೂರಿನ ವಿಶ್ರಾಂತ ಮಾಧ್ಯಮ ಉಪನ್ಯಾಸಕ ಹಾಗೂ ಅಂಬೇಡ್ಕರ್ ವಾದಿಗಳಾದ ಡಾ.ಬಿ.ಪಿ.ಮಹೇಶ್ಚಂದ್ರ ಗುರು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮೊದಲು ಜಿಪಂ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ಶಾಸಕ ಸಿ.ಟಿ.ರವಿ ಮಾಲಾರ್ಪಣೆ ಮಾಡಿದರು.

ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ, ಸದಸ್ಯರಾದ ಜಸಂತಾ ಅನಿಲ್ ಕುಮಾರ್, ರವೀಂದ್ರ ಬೆಳವಾಡಿ. ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಿ ರಾಜ್ ಕುಮಾರ್, ಜಿಪಂ ಸಿಇಒ ಎಸ್.ಪೂವಿತಾ, ಕಂದಾಯ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್.ಎಂ.ಎಚ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಬಿ.ವಿ.ಚೈತ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News