ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸದಾಶಿವರಾವ ಬಾಪು ಸಾಹೇಬ ಭೋಸಲೆ ನಿಧನ

Update: 2021-04-15 05:42 GMT

ಬೆಳಗಾವಿ, ಎ.15: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಶತಾಯುಷಿ ಸದಾಶಿವರಾವ ಬಾಪು ಸಾಹೇಬ ಭೋಸಲೆ ಗುರುವಾರ ಬೆಳಗ್ಗೆ ತಾಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಬಾಪು ಸಾಹೇಬ ಭೋಸಲೆ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1946 (ಬ್ರಿಟಿಶ್ ಸರ್ಕಾರ ಆಗ ಚುನಾವಣೆ ನಡೆಸಿತ್ತು. ಆಗ ಬೆಳಗಾವಿಯು ಮುಂಬೈ ಪ್ರಾಂತ್ಯಕ್ಕೆ ಒಳ‍ಪಟ್ಟಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಇವರು ಸ್ಪರ್ಧಿಸಿದ್ದರು) ಹಾಗೂ 1952 (ಹಿರೇಬಾಗೇವಾಡಿ ಕ್ಷೇತ್ರದಿಂದ)ರಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಸರಕಾರವು ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಮತ್ತು ಸ್ಥಳೀಯರ ಪ್ರಗತಿಗೆ ಸಮಯ ಮೀಸಲಿಡಬೇಕೆಂದು ಒತ್ತಾಯಿಸಿ 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂ ದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಜನರಿಗೆ ನೂರು ಎಕರೆವರೆಗೆ ಜಮೀನನ್ನು ದಾನವಾಗಿ ನೀಡಿ ನೆರವಾಗಿದ್ದರು.

ಅಪ್ಪಟ ಗಾಂಧಿವಾದಿಯಾಗಿದ್ದ ಅವರು ಸರಳ ಜೀವನ ಕ್ರಮದಿಂದಾಗಿ ಗಮನಸೆಳೆದಿದ್ದರು. ಸ್ವತಃ ಸಾವಯವ ಕೃಷಿ ಮಾಡುತ್ತಿದ್ದರು. ತಮಗೆ ಹಾಗೂ ಪತ್ನಿಗೆ ಬೇಕಾದ ಖಾದಿ ಬಟ್ಟೆಗಳನ್ನು ಚರಕದಲ್ಲಿ ತಾವಾಗಿಯೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ವಯೋಸಹಜ ಕಾರಣದಿಂದಿ ಇವೆಲ್ಲ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News