ಸಾರಿಗೆ ನೌಕರರ ಮುಷ್ಕರದಿಂದ ಸರಕಾರಕ್ಕೆ 170 ಕೋಟಿ ರೂ. ನಷ್ಟ: ಸಾರಿಗೆ ಸಚಿವ ಲಕ್ಷ್ಮಣ ಸವದಿ

Update: 2021-04-15 12:58 GMT

ಬೀದರ್, ಎ.15: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದಿಂದ ಸರಕಾರಕ್ಕೆ ಸರಿ ಸುಮಾರು 170 ಕೋಟಿ ರೂ. ನಷ್ಟವಾಗಿದೆ. ಹೀಗಾಗಿ, ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.

ಗುರುವಾರ ಬೀದರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 9 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಸೇರಿ ನಾಲ್ಕು ನಿಗಮಗಳು ಹಾಗೂ ಬಿಎಂಟಿಸಿ ಸಾರಿಗೆಗೆ ಭಾರೀ ನಷ್ಟವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 4,500 ಸಾರಿಗೆ ಬಸ್‍ಗಳು ಸಂಚರಿಸುತ್ತಿವೆ. ಎ.16ರಂದು 5 ಸಾವಿರ ಬಸ್‍ಗಳು ಓಡಾಡುವ ವಿಶ್ವಾಸವಿದೆ. ಆದರೆ ಎಲ್ಲ ಕಡೆ ಖಾಸಗಿ ಬಸ್‍ಗಳ ವ್ಯವಸ್ಥೆ ಮಾಡಿದ್ದೇವೆ ಎಂದರು.

ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 24 ಸಾವಿರ ಖಾಸಗಿ ಬಸ್‍ಗಳು ರಸ್ತೆಗಿಳಿದಿವೆ. ಇಲ್ಲಿಯವರೆಗೆ ಸಾರಿಗೆ ನೌಕರರ ಮುಷ್ಕರದಿಂದ 170 ಕೋಟಿ ರೂ. ನಷ್ಟವಾಗಿವಾದೆ ಎಂದು ತಿಳಿಸಿದರು. ಸಾರಿಗೆ ಸಂಸ್ಥೆಯ ಬಸ್‍ಗಳು ಸಿಬ್ಬಂದಿಯ ಆಸ್ತಿ ಇದ್ದ ಹಾಗೆ. ಯಾವುದೇ ಕಾರಣಕ್ಕೂ ಹಾನಿ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಕಲ್ಲು ತೂರುವವರ ವಿರುದ್ಧ ಕ್ರಮ

‘ರಾಜ್ಯದಲ್ಲಿ ಈವರೆಗೆ 59 ಕೆಎಸ್ಸಾರ್ಟಿಸಿ ಬಸ್‍ಗಳ ಮೇಲೆ ಕಲ್ಲು ಎಸೆಯಲಾಗಿದೆ. ಈ ರೀತಿ ಕಲ್ಲು ತೂರುವುದು ಸರಿಯಲ್ಲ. ಕಲ್ಲು ತೂರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.’

-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News