ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಸಿದ್ದರಾಮಯ್ಯ- ಡಿಕೆಶಿ ಮಾತನಾಡುತ್ತಾರೆ: ಈಶ್ವರಪ್ಪ

Update: 2021-04-15 14:40 GMT

ಶಿವಮೊಗ್ಗ, ಎ.15: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರದ್ದು ಇಟಲಿ ಸಂಸ್ಕೃತಿ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಮೆಚ್ಚಿಸುವುದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ಬೇರೆ ರಾಷ್ಟ್ರಕ್ಕೆ ರಫ್ತು ಬಗ್ಗೆ ಸಹ ಸಿದ್ದರಾಮಯ್ಯ, ಡಿಕೆಶಿ ಮಾತನಾಡಿದ್ದಾರೆ. ಭಾರತೀಯ ಸಂಸ್ಕೃತಿ ಹಂಚಿಕೊಂಡು ತಿನ್ನೋದು. ಇದು ಇಟಲಿ ಸಂಸ್ಕೃತಿಯಲ್ಲ. ಇಟಲಿ ಸಂಸ್ಕೃತಿಯಂತೆಯೇ ಆ ಇಬ್ಬರು ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಸೋನಿಯಾ ಗಾಂಧಿ ಸಂತೃಪ್ತಿಪಡಿಸಲು ಸಿದ್ದರಾಮಯ್ಯ, ಡಿಕೆಶಿ ಮಾತನಾಡುತ್ತಿದ್ದಾರೆ. ನಮ್ಮ ರಾಷ್ಟ್ರದಲ್ಲೂ ಬಳಸಿಕೊಂಡೇ ಬೇರೆ ರಾಷ್ಟ್ರಕ್ಕೇ ಕಳುಹಿಸಲಾಗುತ್ತಿದೆ. ಈ ಭಾರತೀಯ ಸಂಸ್ಕೃತಿಗೆ ಒಗ್ಗುವಂತ ಅಭ್ಯಾಸವೇ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದರು.

ನಳಿನ್ ಕುಮಾರ್ ಕಟೀಲ್‌ರನ್ನು ಸಿದ್ದರಾಮಯ್ಯ ಅವರು ವಿದೂಷಕ ಎಂದು ಕರೆಯುತ್ತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಕರೆಯುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಹೀಗೆ ಕರೆಯುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಈಗ ನಾನು ಲೇ ಸಿದ್ದರಾಮಯ್ಯ ಎಂದು ಕರೆಯಲು ನನಗೇನು ಬರುವುದಿಲ್ಲವೆ. ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಅದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸೋತರು. ಸಿಎಂ ಸ್ಥಾನವನ್ನು ಕಳೆದುಕೊಂಡರು. ಮಾನ, ಮಾರ್ಯಾದೆನೇ ಇಲ್ಲ. ಸೋತಿದ್ದೇವೆ ಎಂಬ ಜ್ಞಾನವಿಲ್ಲದೇ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ತಾವು ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ಅಪಾರ್ಥ ಮಾಡಿಕೊಂಡಿರುವ ವಿಪಕ್ಷಗಳು ಮುಖ್ಯಮಂತ್ರಿ ಮತ್ತು ನಾನು ಬೇರೆ ಬೇರೆ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯಪಾಲರಿಗೆ ನಾನು ನಿಯಮದ ಬಗ್ಗೆ ಮನವಿ ಮಾಡಿದ್ದೇನೆ ಹೊರತು ಬೇರೆ ಏನೂ ಅಲ್ಲ. ನಮ್ಮ ಪಕ್ಷದ ವಿರುದ್ಧವೇ ನಾನೇಕೆ ದೂರು ನೀಡಲಿ ಎಂದರು.

ಕೋವಿಡ್ ಬಗ್ಗೆ ಸಭೆ ಯಾಕೆ ಕರೆಯುತ್ತಾರೆ ? ಅದರಿಂದ ಏನು ಲಾಭ ಎಂದು ಡಿಕೆಶಿ ಕೇಳಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಹೇರಿಬಿಡಿ. ವಿಧಾನಸಭೆಯನ್ನೇ ವಿಸರ್ಜಿಸಿ ಎಂದು ಹೇಳಿದ್ದಾರೆ. ಅವರು ಅರ್ಜೆಂಟಾಗಿ ಅಧಿಕಾರಕ್ಕೆ ಬರಬೇಕಾಗಿದೆ. ಜನರ ಹಿತದೃಷ್ಟಿಯಿಂದ ಸಲಹೆ- ಸೂಚನೆ ನೀಡಿ, ಸಹಕಾರ ಕೊಡೋದು ಬಿಟ್ಟು ಹೀಗೆ ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮುಂದಿನ ಜನ್ಮದಲ್ಲೂ ಬರಲ್ಲ. ಅರ್ಥವಿಲ್ಲದ ಹೇಳಿಕೆ ಕೊಡುತ್ತಿದ್ದರೆ ನಾನೇನು ಮಾಡಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News