ಮಡಿಕೇರಿ: ಲಾರಿಗೆ ಕಾರು ಢಿಕ್ಕಿ; ಎರಡೂ ವಾಹನಗಳು ಸುಟ್ಟು ಕರಕಲು

Update: 2021-04-15 15:25 GMT

ಮಡಿಕೇರಿ, ಎ.15: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಆಕಸ್ಮಿಕವಾಗಿ ಎದುರಿನಿಂದ ಬರುತ್ತಿದ್ದ ಲಾರಿಯ ಡೀಸೆಲ್ ಟ್ಯಾಂಕ್‍ಗೆ ಢಿಕ್ಕಿಯಾದ ಪರಿಣಾಮ ಬೆಂಕಿ ಹತ್ತಿಕೊಂಡು ಎರಡೂ ವಾಹನಗಳು ಸುಟ್ಟು ಕರಕಲಾದ ಹಾಗೂ ವಾಹನದಲ್ಲಿದ್ದವರು ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ಇಲ್ಲಿನ ಸಮೀಪದ ಕೆದಕಲ್‍ನಲ್ಲಿ ನಡೆದಿದೆ.

ಬುಧವಾರ ರಾತ್ರಿ 11.05ರ ಸುಮಾರಿಗೆ ಮೈಸೂರಿನಿಂದ ಟಯರ್ ತುಂಬಿಕೊಂಡು ಮಂಗಳೂರಿನ ಬಂದರಿಗೆ ತೆರಳುತ್ತಿದ್ದ ಲಾರಿಗೆ ಮಡಿಕೇರಿಯಿಂದ ಕುಶಾಲನಗರ ಕಡೆ ತೆರಳುತ್ತಿದ್ದ ನೂತನ ಕಾರು ಮಾರುತಿ ಸುಜುಕಿ ಎಸ್‍ಕ್ರಾಸ್, ಕೆದಕಲ್‍ನ ಪಂಚಾಯತ್ ಬಳಿಯ ತಿರುವಿನಲ್ಲಿ ಢಿಕ್ಕಿಯಾಗಿದೆ. ಚಾಲಕ ಚಿಟ್ಟಿಯಪ್ಪ ಅವರು ಚಲಾಯಿಸುತ್ತಿದ್ದ ಕಾರು ಲಾರಿಯ ಡೀಸೆಲ್ ಟ್ಯಾಂಕ್‍ಗೆ ಢಿಕ್ಕಿಯಾದ ಪರಿಣಾಮ ತಕ್ಷಣವೇ ಬೆಂಕಿ ಹತ್ತಿಕೊಂಡಿದ್ದು ಲಾರಿ ಚಾಲಕ ತಿಮ್ಮಯ್ಯ ಹಾಗೂ ಕಾರು ಚಾಲಕ ಚಿಟ್ಟಿಯಪ್ಪ ವಾಹನಗಳಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.

ವಾಹನಗಳೆರಡೂ ಬೆಂಕಿಗೆ ಆಹುತಿಯಾಗಿದೆ. ಕೆದಕಲ್ ನಿವಾಸಿಯೊಬ್ಬರು ನಿದ್ರೆಯಿಂದ ಎದ್ದು ಬಂದು ಸುಂಟಿಕೊಪ್ಪ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಗಳಾದ ಪುನೀತ್, ವೆಂಕಟರಮಣ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ವಾಹನಗಳು ಉರಿಯುತ್ತಿದ್ದುದು ಗೋಚರಿಸಿದ್ದು, ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. 3 ಅಗ್ನಿ ಶಾಮಕ ವಾಹನಗಳು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಬಳಿಕ ಬೆಳಗಿನ ಜಾವ 2.45ರ ವೇಳೆಗೆ ಅಗ್ನಿಯ ತೀವ್ರತೆ ನಿಯಂತ್ರಣಕ್ಕೆ ಬಂದಿತು. 

ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 3 ಗಂಟೆಗೂ ಅಧಿಕ ಸಮಯ ಸಂಚಾರ ಸ್ಥಗಿತಗೊಂಡಿತ್ತು. ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಲಾರಿ ಚಾಲಕ ತಿಮ್ಮಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನನ್ನು ತನಿಖೆಗೆ ಒಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News