ಪ್ರೇಮ ಪ್ರಕರಣದಲ್ಲಿ ಯುವಕನ ಹತ್ಯೆ ಆರೋಪ: ಮಂಡ್ಯ ಕಲ್ಲಹಳ್ಳಿಯಲ್ಲಿ ಬಿಗುವಿನ ವಾತಾವರಣ

Update: 2021-04-15 16:31 GMT

ಮಂಡ್ಯ, ಎ.15: ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನ ಕೊಲೆ ನಡೆದಿದೆ ಎನ್ನಲಾಗಿದ್ದು, ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಠಿಯಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಬಡಾವಣೆಯ ಸತೀಶ್ ಎಂಬುವರ ಪುತ್ರ ದರ್ಶನ್(17) ಬುಧವಾರ ತಡರಾತ್ರಿ ಸಾವನ್ನಪ್ಪಿದ್ದು, ಯುವತಿಯ ಮನೆಯವರ ಥಳಿತದಿಂದ ತಮ್ಮ ಪುತ್ರ ಸಾವನ್ನಪ್ಪಿದ್ದಾನೆಂದು ಯುವಕನ ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಸದರಿ ಬಡಾವಣೆಯ ನಿವಾಸಿಯಾದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಮನೆಯವರು ದರ್ಶನ್‍ನನ್ನು ಥಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ದರ್ಶನ್‍ನನ್ನು ಜಿಲ್ಲಾಸ್ಪತ್ರೆ ಮಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ದರ್ಶನ್ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ಕಡೆಯವರು ಶಿವಲಿಂಗು ಪ್ರತಿಕೃತಿಯನ್ನು ದಹಿಸಿ ಬಂಧನಕ್ಕೆ ಆಗ್ರಹಿಸಿದ್ದಾರೆ. ಕಲ್ಲಹಳ್ಳಿಯಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈ ಸಂಬಂಧ ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಹಾಗೂ ದರ್ಶನ್ ಮೇಲಿನ ಹಲ್ಲೆ ವೇಳೆ ಸ್ಥಳದಲ್ಲಿದ್ದರೆನ್ನಲಾದ ರಿಸರ್ವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹತ್ಯೆ ಖಂಡಿಸಿ ಪ್ರತಿಭಟನೆ
ಯುವಕ ದರ್ಶನ್ ಹತ್ಯೆ ಖಂಡಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗಣ್ಣ ಬಾಣಸವಾಡಿ ನೇತೃತ್ವದಲ್ಲಿ ನಗರದ ಪಶ್ಚಿಮ ಠಾಣೆ ಎದುರು ಪ್ರತಿಭಟನೆ ನಡೆಯಿತು.

ಕೂಡಲೇ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಸೇರಿದಂತೆ ಹತ್ಯೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ದರ್ಶನ್ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಆರೋಪಿಸಿದರು.

ಒಕ್ಕೂಟದ ಜಿಲ್ಲಧ್ಯಕ್ಷ ಎಲ್.ಕೃಷ್ಣ, ಮಲ್ಲಿಕಾರ್ಜುನ್, ಬೊಮ್ಮಣ್ಣ, ಭರತ್, ಮಂಜು, ರಾಕೇಶ್, ಸಂತೋಷ್, ಹರ್ಷ, ಜಯರಾಮ, ಯುವಕನ ಚಿಕ್ಕಪ್ಪ ನಾಗೇಂದ್ರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News