ಸಾರಿಗೆ ನೌಕರರ ವಿರುದ್ಧ 31 ಎಫ್‍ಐಆರ್ ದಾಖಲು: 47 ನೌಕರರ ಬಂಧನ

Update: 2021-04-15 17:28 GMT

ಬೆಂಗಳೂರು, ಎ.15: ಬೇಡಿಕೆ ಈಡೇರಿಕೆ ಸಂಬಂಧ ರಾಜ್ಯ ಸರಕಾರ ಸೂಕ್ತ ಭರವಸೆ ನೀಡದ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಎ.15ರಂದು ಸರಕಾರಿ ಬಸ್‍ಗಳಿಗೆ ಕಲ್ಲು ತೂರಿದ ಆರೋಪದ ಮೇಲೆ ಸಾರಿಗೆ ನೌಕರರ ವಿರುದ್ಧ ಪೊಲೀಸರು 31 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.

ಗುರುವಾರ ಕೆಎಎಸ್ಸಾರ್ಟಿಸಿ 28, ಬಿಎಂಟಿಸಿ 1, ಎನ್‍ಇಕೆಆರ್‍ಟಿಸಿ 2 ಸೇರಿ ಒಟ್ಟು 31 ಎಫ್‍ಐಆರ್ ಗಳನ್ನು ಸಾರಿಗೆ ನೌಕರರ ವಿರುದ್ಧ ದಾಖಲು ಮಾಡಲಾಗಿದ್ದು, 47 ನೌಕರರನ್ನು ಕೆಸ್ಮಾ ಅಡಿ ಪೊಲೀಸರು ಬಂಧಿಸಿದ್ದಾರೆ.

ಎ.15ರಂದು 2006 ಕೆಎಸ್ಸಾರ್ಟಿಸಿ ಬಸ್‍ಗಳು ಸಂಚರಿಸಿದರೆ, 707 ಬಿಎಂಟಿಸಿ, 786 ಎನ್‍ಇಕೆಆರ್‍ಟಿಸಿ, 644 ಎನ್‍ಡಬ್ಲ್ಯೂಕೆಆರ್‍ಟಿಸಿ ಬಸ್‍ಗಳು ರಾಜ್ಯದಲ್ಲಿ ಸಂಚರಿಸಿವೆ.

2,237 ನೌಕರರ ಹೆಸರು ಉಲ್ಲೇಖಿಸಿ ಆದೇಶ ಹೊರಡಿಸಿದ ಬಿಎಂಟಿಸಿ, 'ಮುಷ್ಕರದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ನೌಕರರು ತೊಂದರೆ ಉಂಟುಮಾಡಿದ್ದಾರೆ, ಅಲ್ಲದೇ ಹಿರಿಯ ನೌಕರರಾಗಿ ಸಂಸ್ಥೆ ವಿಶ್ವಾಸ ಕಳೆದುಕೊಂಡು ಸಂಸ್ಥೆಯು ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡಿದ್ದಾರೆ. ಈ ಹಿನ್ನೆಲೆ 2,237 ಸಾರಿಗೆ ನೌಕರರು ಎ.15ರ ಸಂಜೆ 5ರೊಳಗೆ ತಮ್ಮ ಡಿಪೋಗಳಿಗೆ ಹಾಜರಾಗಬೇಕು. ಜೊತೆಗೆ ಯಾವ ಕಾರಣಕ್ಕೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಲಿಖಿತ ಸಮಜಾಯಿಷಿ ನೀಡಬೇಕು' ಎಂದು ಹೇಳಿದ್ದರೂ ನೌಕರರು ಡಿಪೋಗಳಿಗೆ ಹಾಜರಾಗಿ ಸಮಜಾಯಿಷಿ ನೀಡುವ ಕೆಲಸವನ್ನು ಮಾಡಿಲ್ಲ. ಇದರಿಂದ, ಸರಕಾರ ಹಾಗೂ ನೌಕರರ ಮಧ್ಯದ ಪ್ರತಿಷ್ಠೆಯಿಂದಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News