ಕೋವಿಡ್‌ ಗಾಳಿಯ ಮೂಲಕ ಹರಡುತ್ತಿದೆ ಎನ್ನುವುದಕ್ಕೆ ಬಲವಾದ ಪುರಾವೆಗಳು ಲಭ್ಯ: ಲ್ಯಾನ್ಸೆಟ್‌ ವರದಿ

Update: 2021-04-16 16:05 GMT

ಕೊಲರಾಡೊ (ಅಮೆರಿಕ), ಎ. 16: ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗುವ ಕೊರೋನ ವೈರಸ್ (ಸಾರ್ಸ್-ಕೊವ್-2 ವೈರಸ್) ಪ್ರಧಾನವಾಗಿ ಗಾಳಿಯಲ್ಲೇ ಹರಡುತ್ತದೆ ಎನ್ನುವುದಕ್ಕೆ ‘ಸ್ಥಿರ ಹಾಗೂ ಬಲವಾದ ಪುರಾವೆಯಿದೆ’ ಎಂದು ವೈದ್ಯಕೀಯ ಪತ್ರಿಕೆ ‘ಲ್ಯಾನ್ಸೆಟ್’ ವರದಿ ಮಾಡಿದೆ.

 ಹಾಗಾಗಿ, ವೈರಸ್ ಪ್ರಮುಖವಾಗಿ ಗಾಳಿಯಲ್ಲಿ ಹರಡುತ್ತದೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳದ ಸಾರ್ವಜನಿಕ ಆರೋಗ್ಯ ರಕ್ಷಣಾ ನಿಯಮಗಳು ಜನರನ್ನು ಅಪಾಯಕ್ಕೆ ಗುರಿಪಡಿಸುತ್ತವೆ ಹಾಗೂ ವೈರಸ್ ಸುಲಭವಾಗಿ ಹರಡಲು ಅವಕಾಶ ನೀಡುತ್ತವೆ ಎಂದು ಬ್ರಿಟನ್, ಅಮೆರಿಕ ಮತ್ತು ಕೆನಡಗಳ ಆರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘‘ವೈರಸ್ ಗಾಳಿ ಮೂಲಕ ಹರಡುತ್ತದೆ ಎನ್ನುವುದನ್ನು ಸೂಚಿಸುವ ಪುರಾವೆ ಪರಿಣಾಮಕಾರಿಯಾಗಿದೆ ಹಾಗೂ ಬಾಯಿ ಮತ್ತು ಮೂಗುಗಳಿಂದ ಹೊರಬೀಳುವ ದೊಡ್ಡ ಬಿಂದುಗಳ ಮೂಲಕ ವೈರಸ್ ಹರಡುತ್ತದೆ ಎನ್ನುವುದನ್ನು ಸಮರ್ಥಿಸುವ ಪುರಾವೆ ಈಗ ಬಹುತೇಕ ಇಲ್ಲವಾಗಿದೆ’’ ಎಂದು ಕೋಪರೇಟಿವ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಎನ್ವಿರಾನ್‌ಮೆಂಟಲ್ ಸಯನ್ಸಸ್ (ಸಿಐಆರ್‌ಇಎಸ್)ನಲ್ಲಿ ರಸಾಯನ ತಜ್ಞ ಆಗಿರುವ ಜೋಸ್ ಲೂಯಿಸ್ ಜಿಮೆನೆಝ್ ಹೇಳುತ್ತಾರೆ.

‘‘ಹಾಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ವೈರಸ್ ಹರಡುವುದಕ್ಕೆ ಸಂಬಂಧಿಸಿದ ತಮ್ಮ ಸಿದ್ಧಾಂತವನ್ನು ವೈಜ್ಞಾನಿಕ ಪುರಾವೆಗೆ ಹೊಂದಿಸಿಕೊಳ್ಳಬೇಕು ಹಾಗೂ ಆ ಮೂಲಕ ಗಾಳಿ ಮೂಲಕ ಹರಡುವ ಸೋಂಕನ್ನು ತಡೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News