ಅಮಾನತು ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ: ಸೀಡಿ ಪ್ರಕರಣದ ಯುವತಿ ಪರ ವಕೀಲ ಮಂಜುನಾಥ್
ಬೆಂಗಳೂರು, ಎ.16: ಬಾರ್ ಕೌನ್ಸಿಲ್‍ಗೆ ಪತ್ರ ಬರೆದಿರುವ ಸಿಡಿ ಯುವತಿ ಪರ ವಕೀಲರಲ್ಲಿ ಒಬ್ಬರಾದ ಮಂಜುನಾಥ್ ಅವರು ತಮ್ಮ ವಿರುದ್ಧ ಕ್ರಮ ಕೈಗೊಂಡಿದ್ದರೆ ಅಧಿಕೃತವಾಗಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಬಾರ್ ಕೌನ್ಸಿಲ್‍ನಿಂದ ನನ್ನನ್ನು ಅಮಾನತು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಅಧಿಕೃತವಾಗಿ ನನಗೆ ಯಾವುದೆ ಮಾಹಿತಿ ಬಂದಿಲ್ಲ. ನನ್ನ ವಿರುದ್ಧ ಕ್ರಮ ಕೈಗೊಂಡಿದ್ದರೆ ಮಾಹಿತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಅವರು, ನಾನು ನೋಂದಣಿಯಾದಾಗ ಹಳೆಯ ಮನೆ ವಿಳಾಸವನ್ನು ಬಾರ್ ಕೌನ್ಸಿಲ್‍ಗೆ ನೀಡಿದ್ದೆ. ಬಹುಶಃ ಅಲ್ಲಿಗೆ ಮಾಹಿತಿ ಹೋಗಿರಬಹುದು. ನನಗೆ ಈವರೆಗೂ ಅಧಿಕೃತವಾದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ, ಬಾರ್ ಕೌನ್ಸಿಲ್‍ಗೆ ಪತ್ರ ಬರೆದು ಹೊಸ ಕಚೇರಿಯ ವಿಳಾಸ ನೀಡಿದ್ದು, ಇನ್ನು ಮುಂದೆ ಹೊಸ ವಿಳಾಸಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ನಾನು ಸ್ಟಾಂಪ್ ಹಗರಣದ ಬಗ್ಗೆ ಸಾಕ್ಷ್ಯಗಳನ್ನು ಇಟ್ಟುಕೊಂಡೆ ಮಾತನಾಡಿದ್ದೇವೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಶಿಸ್ತು ಸಮಿತಿ ರಚನೆ ಮಾಡಬೇಕಿತ್ತು, ಶೋಕಾಸ್ ನೋಟಿಸ್ ನೀಡಬೇಕಿತ್ತು. ಅದ್ಯಾವುದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.