ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾಗಿದ್ದಕ್ಕೆ ಆಕ್ರೋಶ: 'ಮುಖ್ಯಮಂತ್ರಿ ಪದಕ ಪುರಸ್ಕೃತ' ಬಸ್ ಚಾಲಕನ ಕೊಲೆ

Update: 2021-04-16 13:57 GMT
ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಸಂದರ್ಭ (ಫೈಲ್ ಚಿತ್ರ)

ಬೆಂಗಳೂರು, ಎ.16: ಆರನೇ ವೇತನ ಜಾರಿಗೆ ಪಟ್ಟು ಹಿಡಿದು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ(ಎ.17) ಹತ್ತನೇ ದಿನ ಪೂರೈಸಿದೆ. ಇದರ ನಡುವೆ ಬಸ್ ಚಾಲನೆ ಮಾಡಿದ್ದಾರೆ ಎಂದು ಆಕ್ರೋಶಗೊಂಡ ಗುಂಪೊಂದು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಚಾಲಕನೊರ್ವನನ್ನು ಕೊಲೆಗೈದಿರುವ ದುರ್ಘಟನೆ ಜಮಖಂಡಿಯಲ್ಲಿ ವರದಿಯಾಗಿದೆ.

ನಬಿ ರಸೂಲ್ ಆವಟಿ (59) ಎಂಬುವವರು ಮೃತ ಚಾಲಕರಾಗಿದ್ದು, ಇಲ್ಲಿನ ಜಮಖಂಡಿ ತಾಲೂಕಿನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಶುಕ್ರವಾರ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ತಡೆದ ಅಪರಿಚಿತ ದುಷ್ಕರ್ಮಿಗಳು ಇವರ ಮೇಲೆ ಕಲ್ಲುಗಳಿಂದ ಗಂಭೀರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಜಮಖಂಡಿಯ ಆವಟಿ ರಸ್ತೆಯ ನಿವಾಸಿಯಾದ ನಬಿ ರಸೂಲ್ ಅವರು ಎ.7ರಿಂದ ಆರಂಭವಾದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮನೆಯಲ್ಲಿಯೇ ಇದ್ದರು. ಆದರೆ, ಕಳೆದ ಮೂರು ದಿನಗಳ‌ ಹಿಂದೆಯಷ್ಟೇ ಮೇಲಾಧಿಕಾರಿಗಳ ಕರೆಗೆ ಓಗೊಟ್ಟು ನಬಿ ರಸೂಲ್ ಆವಟಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ.

ಆನಂತರ ಅವರು ಜಮಖಂಡಿ ಬಸ್ ಘಟಕಕ್ಕೆ ಸೇರಿದ ಬಸ್‌ ಚಾಲನೆ ಮಾಡುತ್ತಿದ್ದರು. ಇಂದು ಬಸ್‌ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಮುನ್ನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆಯೇ ನಿರ್ಜನ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಬಸ್ ಅಡ್ಡಹಾಕಿ ಚಾಲಕನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ತಲೆಗೆ ಪೆಟ್ಟು ಬಿದ್ದು ನಬಿ ರಸೂಲ್ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು, ಸ್ಥಳೀಯರ ನೆರವಿನಿಂದ ರಸೂಲ್ ರನ್ನು ಜಮಖಂಡಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಮಖಂಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇನ್ನು, ಅನುಮಾನಾಸ್ಪದವಾಗಿ ವರ್ತಿಸಿದ 10ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು ಜಮಖಂಡಿ ನಗರ ಠಾಣೆಗೆ ಕರೆತಂದು ವಿಚಾರಣೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್ ಭೇಟಿ ನೀಡಿ ಪರಿಶೀಲಿಸಿದರು.

ಚಿನ್ನದ ಪದಕಕ್ಕೆ ಭಾಜನರಾಗಿದ್ದ ರಸೂಲ್ ಆವಟಿ

1984ರಲ್ಲಿ ನಬಿ ರಸೂಲ್ ಆವಟಿ ಅವರು ಸಾರಿಗೆ ಸಂಸ್ಥೆಯ ನೌಕರಿಗೆ ಸೇರಿದ್ದರು. ತಮ್ಮ 37 ವರ್ಷಗಳ ಸೇವಾ ಅವಧಿಯಲ್ಲಿ ಒಮ್ಮೆಯೂ ಅಪಘಾತ ಮಾಡದ ಕಾರಣ 2015ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ನಿವೃತ್ತಿಯ ಅಂಚಿಗೆ ಬಂದಿದ್ದ ಅವರಿಗೆ ಡಿಪೋ ಹಾಗೂ ಬಸ್‌ ನಿಲ್ದಾಣದಲ್ಲಿಯೇ ಕೆಲಸ ನೀಡಲಾಗಿತ್ತು. ಇತ್ತೀಚೆಗೆ ಅವರು ಚಾಲಕರಾಗಿ ಹೊರಗೆ ಹೋಗುತ್ತಿರಲಿಲ್ಲ. ಸಿಬ್ಬಂದಿ ಮುಷ್ಕರದ ಕಾರಣ ಅನಿವಾರ್ಯವಾಗಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News