×
Ad

ವಿಠಲ್ ಹೆಗ್ಡೆ ವಿರುದ್ಧ ಸುಳ್ಳು ಆರೋಪ: ಸಂಪಾದಕ, ಪ್ರಕಾಶಕರಿಗೆ ಜೈಲು ಶಿಕ್ಷೆಯ ತೀರ್ಪು ಎತ್ತಿಹಿಡಿದ ನ್ಯಾಯಾಲಯ

Update: 2021-04-16 20:58 IST
ವಿಠಲ್ ಹೆಗ್ಡೆ

ಚಿಕ್ಕಮಗಳೂರು, ಎ.16: ಸುಳ್ಳು ಆರೋಪ, ಮಾನಹಾನಿ, ಚಾರಿತ್ರ್ಯ ಹರಣ ಮತ್ತು ಗೌರವಕ್ಕೆ ಚ್ಯುತಿ ಬರುವಂತಹ ವರದಿ ಮಾಡಿದ್ದ ಪತ್ರಿಕೆಯೊಂದರ ಸಂಪಾದಕ ಹಾಗೂ ಪ್ರಕಾಶಕರಿಗೆ ಕೆಳ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆ ಹಾಗೂ ದಂಡದ ತೀರ್ಪನ್ನು ಜಿಲ್ಲಾ ಸತ್ರ ನ್ಯಾಯಾಲಯ ಎತ್ತಿ ಹಿಡಿದು ಶಿಕ್ಷೆಯನ್ನು ಖಾಯಂಗೊಳಿಸಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಪರಿಸರವಾದಿ ಕಲ್ಕುಳಿ ವಿಠಲ್‍ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2007, ಜು.3ರಂದು ಹೊಸದಿಗಂತ ದಿನ ಪತ್ರಿಕೆಯಲ್ಲಿ ತಪ್ಪು ವರದಿ ಪ್ರಕಟಿಸಿದ್ದ ಪತ್ರಿಕೆಯ ಸಂಪಾದಕ ದು.ಗು.ಲಕ್ಷ್ಮಣ್ ಹಾಗೂ ಪ್ರಕಾಶಕ ಎಸ್.ಶಾಂತರಾಮ್ ಅವರು ಶಿಕ್ಷೆಗೆ ಗುರಿಯಾಗಿದ್ದು, ಕಲ್ಕುಳಿ ವಿಠಲ್ ಹೆಗ್ಡೆ ನಕ್ಸಲ್ ಬೆಂಬಲಿಗ ಎಂಬ ಶೀರ್ಷಿಕೆಯಡಿಯಲ್ಲಿ ದುರುದ್ದೇಶದಿಂದ ಛಾಯಾಚಿತ್ರಗಳೊಂದಿಗೆ ತನ್ನ ವಿರುದ್ಧ ಸುಳ್ಳು ವರದಿ ಪ್ರಕಟಿಸಲಾಗಿತ್ತು. ಈ ವರದಿ ವಿರುದ್ಧ ಶೃಂಗೇರಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ 2019, ಜ.25ರಂದು ತೀರ್ಪು ಪ್ರಕಟಿಸಿ 4 ಸೆಕ್ಷನ್‍ಗಳಡಿಯಲ್ಲಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪನ್ನು ಜಿಲ್ಲಾ ಸತ್ರ ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕೆ ಸಂಪಾದಕ ದು.ಗು.ಲಕ್ಷ್ಮಣ್ ಹಾಗೂ ಪ್ರಕಾಶಕ ಎಸ್.ಶಾಂತರಾಮ್ ಅವರು ಮಾಡಿರುವ ತಪ್ಪು ಸಾಬೀತಾಗಿರುವುದರಿಂದ ಜಿಲ್ಲಾ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ 40 ಸಾವಿರ ರೂ. ದಂಡ ಹಾಗೂ 7 ತಿಂಗಳ ಸಜೆಯನ್ನು ಖಾಯಂಗೊಳಿಸಿ ಆದೇಶಿಸಿದೆ. ಚಾರಿತ್ರ್ಯ ವಧೆ ಮಾಡಿರುವುದರಿಂದ ದೂರದಾರರಿಗೆ 35 ಸಾವಿರ ರೂ. ಪರಿಹಾರವನ್ನು ಹಾಗೂ ಸರಕಾರಕ್ಕೆ 5 ಸಾವಿರ ರೂ. ದಂಡವನ್ನು ಪಾವತಿಸಬೇಕೆಂದು, ತಪ್ಪಿದಲ್ಲಿ 7 ತಿಂಗಳ ಜೈಲು ಶಿಕ್ಷೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ ಎಂದು ವಿಠಲ್‍ ಹೆಗ್ಡೆ ತಿಳಿಸಿದ್ದಾರೆ.

ಜನಪರ ಹೋರಾಟಗಾರನಾದ ನನ್ನ ಹಾಗೂ ನಮ್ಮ ಚಳವಳಿಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಸಾರ್ವಜನಿಕರಲ್ಲಿ ನನ್ನ ಬಗ್ಗೆ ಅಗೌರವವನ್ನುಂಟು ಮಾಡಿ ನನ್ನನ್ನು ಮತ್ತು ಚಳವಳಿಗಳನ್ನು ಮುಗಿಸಲು ಈ ವರದಿ ಮೂಲಕ ಸಂಚು ಮಾಡಲಾಗಿತ್ತು. ಆದರೆ ನ್ಯಾಯಾಲಯದ ತೀರ್ಪುನಿಂದಾಗಿ ಇಬ್ಬರು ಪತ್ರಕರ್ತರಿಗೆ ತಕ್ಕ ಶಿಕ್ಷೆಯಾಗಿದೆ. ನಮ್ಮ ಹೋರಾಟ ಎಂದಿಗೂ ಪ್ರಜಾತಾಂತ್ರಿಕವಾಗಿಯೂ, ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯುತ್ತಿರುವುದಕ್ಕೆ ಈ ತೀರ್ಪು ಸಾಕ್ಷಿ ಹಾಗೂ ಜನಪರ ಹೋರಾಟಗಾರರಿಗೆ ಸಿಕ್ಕ ಜಯವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿಠಲ್ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News