×
Ad

'ಮತದಾರರಿಗೆ ಹಣ ಹಂಚಲು ಬಂದ ವ್ಯಕ್ತಿಗೆ ಥಳಿಸಿದ ಗ್ರಾಮಸ್ಥರು': ವಿಡಿಯೋ ಟ್ವೀಟ್ ಮಾಡಿದ ಕಾಂಗ್ರೆಸ್

Update: 2021-04-16 21:24 IST

ಬಸವಕಲ್ಯಾಣ (ಬೀದರ್), ಎ.16: ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮತದಾರರಿಗೆ ಹಣ ಹಂಚಲು ಬಂದಾಗ ಗ್ರಾಮಸ್ಥರು ಅವನನ್ನು ಹಿಡಿದು ಹೊಡೆದಿದ್ದಾರೆ ಎನ್ನಲಾದ ಘಟನೆ ನಡೆದಿದ್ದು, ಈ ಸಂಬಂಧ ರಾಜ್ಯ ಕಾಂಗ್ರೆಸ್ ವಿಡಿಯೋಗಳನ್ನು ಟ್ವೀಟ್ ಮಾಡಿದೆ.

ರಾಜ್ಯ ಕಾಂಗ್ರೆಸ್ ಈ ಸಂಬಂಧ ಕೆಲ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಒಂದು ವಿಡಿಯೋದಲ್ಲಿ ಹಣ ಹಂಚಲು ಬಂದಿದ್ದಾನೆನ್ನಲಾದ ವ್ಯಕ್ತಿಗೆ ಗ್ರಾಮಸ್ಥರು ಹೊಡೆಯುತ್ತಿರುವುದು ಕಂಡು ಬರುತ್ತದೆ. ಓರ್ವ ವ್ಯಕ್ತಿ ನಿಮ್ಮನ್ನು ಯಾರು ಕಳುಹಿಸಿದ್ದು ಎಂದು ಪ್ರಶ್ನಿಸುತ್ತಲೇ ಮತ್ತೊಬ್ಬ ಹಿರಿಯ ವ್ಯಕ್ತಿ ಹಣ ಹಂಚಲು ಬಂದಿದ್ದಾನೆನ್ನಲಾದ ವ್ಯಕ್ತಿಯ ಕೆನ್ನೆಗೆ ಬಾರಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

'ಉಪ ಚುನಾವಣೆಯಲ್ಲಿ ಬಿಜೆಪಿ ವಿಧಾನಸೌಧದಲ್ಲಿ ಲೂಟಿ ಹೊಡೆದ ಹಣವನ್ನು ಚೆಲ್ಲಾಡುತ್ತಿದೆ. ಬಸವಕಲ್ಯಾಣದಲ್ಲಿ ಭ್ರಷ್ಟ ಬಿಜೆಪಿಯ ಕಾರ್ಯಕರ್ತರು ಹಾಗೂ ಅಭ್ಯರ್ಥಿ ಶರಣು ಸಲಗಾರ್ ಹಣ ಹಂಚಿಕೆಯ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸಾಧನೆ ಇಲ್ಲದ ಬಿಜೆಪಿ ಸೋಲಿನ ಹತಾಶೆಯಲ್ಲಿ ಹಣದ ಹೊಳೆ ಹರಿಸುತ್ತಿದೆ' ಎಂದು ಟ್ವೀಟ್ ನಲ್ಲಿ ವಿಡಿಯೋಗೆ ಅಡಿಬರಹ ಹಾಕಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ಮತ್ತೊಂದು ವಿಡಿಯೋದಲ್ಲಿ ಆ ವ್ಯಕ್ತಿ ನೆಲಕ್ಕೆ ಬಿದ್ದಿರುವ ನೋಟುಗಳನ್ನು ಹೆಕ್ಕುತ್ತಿರುವುದು ಕಂಡು ಬರುತ್ತದೆ. ''ಝಣ ಝಣ ಕಾಂಚಾಣ ಭ್ರಷ್ಟಾಚಾರವೇ ಬಿಜೆಪಿ ಲಾಂಛನ. ಉಪಚುನಾವಣೆಯ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳ ಖರೀದಿಗಾಗಿ ಹಣ ಚೆಲ್ಲಾಡುತ್ತಿದೆ. ರಾಜಾರೋಷವಾಗಿ ಇಷ್ಟೆಲ್ಲಾ ಅಕ್ರಮಗಳು ನಡೆದರೂ ಮುಖ್ಯ ಚುನಾವಣಾಧಿಕಾರಿ ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದ ಜನತೆಗೆ ಅಕ್ರಮದಲ್ಲಿ ಆಯೋಗವೂ ಶಾಮಿಲಾಗಿದೆಯೇ ಎಂಬ ಅನುಮಾನ ಮೂಡುವುದು ಸಹಜ' ಎಂದು ಕಾಂಗ್ರೆಸ್ ತಿಳಿಸಿದೆ.

ಹಣ ಹಂಚುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತನ ಪರವಾಗಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಬಿಡಿಸಿಕೊಂಡು ಹೋಗಲು ಬರುತ್ತಾರೆ. ಹಣ ಹಂಚಿಕೆಯಲ್ಲಿ ಸ್ವತಃ ಅಭ್ಯರ್ಥಿಯ ಕೈವಾಡವಿರುವುದು ಸ್ಪಷ್ಟವಾಗಿದೆ. ಮುಖ್ಯ ಚುನಾವಣಾಧಿಕಾರಿ ಅವರೇ, ಕೂಡಲೇ ಬಿಜೆಪಿ ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News