ಕೊಲೆ ಪ್ರಕರಣ: ರಾಜ್ಯ ಬೀಜ ನಿಗಮದ ನಿರ್ದೇಶಕ ಸೇರಿ 6 ಮಂದಿಗೆ ಜೀವಾವಧಿ ಶಿಕ್ಷೆ

Update: 2021-04-16 17:54 GMT

ಕೋಲಾರ, ಎ.16: ತಾಲೂಕಿನ ವಡಗೂರು ಗ್ರಾಮದಲ್ಲಿ ರಾಜಕೀಯ ದಳ್ಳುರಿ ಹೊತ್ತಿಸಿದ್ದ ಸುಮಾರು ಒಂದೂವರೆ ದಶಕದ ಹಿಂದಿನ ಕೊಲೆ ಪ್ರಕರಣಗಳ ಸಂಬಂಧ ರಾಜ್ಯ ಬೀಜ ನಿಗಮದ ನಿರ್ದೇಶಕ ಸೇರಿದಂತೆ 6 ಮಂದಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್, ಅವರ ಬೆಂಬಲಿಗರಾದ ಸಿ.ಗೋವಿಂದ, ಮುನಿಬೈರಪ್ಪ, ರೆಡ್ಡಿ ಮತ್ತು ಸೋಮಶೇಖರ್ ಅವರನ್ನು ವಡಗೂರು ಗ್ರಾಮದ ದೊಡ್ಡಪ್ಪಯ್ಯ ಅವರ ಕೊಲೆ ಪ್ರಕರಣದಲ್ಲಿ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಅದೇ ಗ್ರಾಮದ ಜಯರಾಮ್ ಅವರ ಕೊಲೆ ಪ್ರಕರಣದಲ್ಲಿ ಡಿ.ವಿ.ಸೋಮಶೇಖರ್ ಅವರನ್ನು ನ್ಯಾಯಾಲಯ ಅಪರಾಧಿಯೆಂದು ಘೋಷಿಸಿದೆ.

ದೊಡ್ಡಪ್ಪಯ್ಯರ ಕೊಲೆ ಪ್ರಕರಣದ 26 ಆರೋಪಿಗಳ ಪೈಕಿ 21 ಮಂದಿಯನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿದೆ. ಉಳಿದ 5 ಮಂದಿಗೆ ಶಿಕ್ಷೆ ಮತ್ತು ದಂಡ ವಿಧಿಸಿದೆ. ಜಯರಾಮ್ ಕೊಲೆ ಪ್ರಕರಣದಲ್ಲಿ ಏಕೈಕ ಆರೋಪಿಯಾಗಿದ್ದ ಡಿ.ವಿ.ಸೋಮಶೇಖರ್ ವಿರುದ್ಧದ ಆರೋಪವೂ ಸಾಬೀತಾಗಿದ್ದು, ಅವರಿಗೆ ಜೀವಾವಧಿ ಶಿಕ್ಷೆ ಜತೆಗೆ ದಂಡ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆ ವಿಚಾರವಾಗಿ ದೊಡ್ಡಪ್ಪಯ್ಯ ಮತ್ತು ಡಿ.ಎಲ್.ನಾಗರಾಜ್ ಗುಂಪಿನ ನಡುವೆ 2006ರ ಜುಲೈ 22 ರಂದು ಘರ್ಷಣೆ ನಡೆದಿತ್ತು. ಘರ್ಷಣೆ ವಿಕೋಪಕ್ಕೆ ತಿರುಗಿ ನಾಗರಾಜ್ ಮತ್ತು ಬೆಂಬಲಿಗರು ದೊಡ್ಡಪ್ಪಯ್ಯರ ಮನೆ ಬಳಿ ಗಲಾಟೆ ನಡೆದಿದ್ದು, ಆಗ ದೊಡ್ಡಪ್ಪಯ್ಯರ ಪುತ್ರ ಡಿ.ವಿ.ಸೋಮಶೇಖರ್ ಎದುರಾಳಿ ಗುಂಪಿನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದರು.

ಗುಂಡಿನ ದಾಳಿಯಲ್ಲಿ ನಾಗರಾಜ್ ಬೆಂಬಲಿಗರಾದ ಜಯರಾಮ್, ಲಕ್ಷ್ಮೀಪತಿ ಮತ್ತು ನಾರಾಯಣಪ್ಪ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಜಯರಾಮ್ ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ನಾಗರಾಜ್ ಬೆಂಬಲಿಗರು ದೊಡ್ಡಪ್ಪಯ್ಯರ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದರು. ಅಲ್ಲದೇ, ದೊಡ್ಡಪ್ಪಯ್ಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಬಳಿಕ ಉಭಯ ಗುಂಪುಗಳು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಿಸಿದ್ದವು. ಪೊಲೀಸರು ಎರಡೂ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯದಲ್ಲಿ 15 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿತ್ತು.

ತುಂಬಿದ ನ್ಯಾಯಾಲಯ: ಪ್ರಕರಣ ಸಂಬಂಧ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಅಂತಿಮ ಆದೇಶ ಪ್ರಕಟವಾಗುವ ಸುದ್ದಿ ತಿಳಿದಿದ್ದ ವಡಗೂರು ಗ್ರಾಮಸ್ಥರು, ರಾಜಕೀಯ ಮುಖಂಡರು, ಅಪರಾಧಿಗಳ ಕುಟುಂಬ ಸದಸ್ಯರು, ಸಂಬಂಧಿಕರು, ವಕೀಲರು, ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಕೊಠಡಿಯಲ್ಲಿ ಕಿಕ್ಕಿರಿದು ಸೇರಿದ್ದರು.

ಬೆಳಗ್ಗೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಡಿ.ಪವನೇಶ್ 6 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ಪ್ರಮಾಣವನ್ನು ಮಧ್ಯಾಹ್ನ ಪ್ರಕಟಿಸುವುದಾಗಿ ಹೇಳಿ ಕಲಾಪ ಮುಂದೂಡಿದರು. ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ನ್ಯಾಯಾಧೀಶರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News