ದುರ್ಬಲರಾಗುತ್ತಿರುವ ‘ಬಹುಜನ’ರು

Update: 2021-04-17 09:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಈ ದೇಶದ ಅತ್ಯುನ್ನತ ನ್ಯಾಯಾಲಯ ‘ಮೀಸಲಾತಿಯನ್ನು ಇನ್ನೂ ಎಷ್ಟು ಸಮಯ ಮುಂದುವರಿಸುತ್ತೀರಿ?’ ಎಂಬ ಪ್ರಶ್ನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಉತ್ತರ ರೂಪದ ಮಾತುಗಳನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಕಾರ್ಯಕ್ರಮವೊಂದರಲ್ಲಿ ಆಡಿದ್ದಾರೆ. ‘ಎಲ್ಲಿಯವರೆಗೆ ಈ ದೇಶದಲ್ಲಿ ಜಾತಿ ಕಾರಣದಿಂದ ಅಸಮಾನತೆ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ’ ಎನ್ನುವ ಧ್ವನಿಯೊಂದು ಅವರ ಮಾತಿನಲ್ಲಿದೆ. ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನ ರಚನೆಯಾಗಿ 70 ವರ್ಷ ಕಳೆದ ಬಳಿಕ ದೇಶದಲ್ಲಿ ಜಾತಿ ಆಧಾರಿತ ತಾರತಮ್ಯ ಅಸ್ತಿತ್ವದಲ್ಲಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ ಮುಚ್ಚುಮರೆಯಿಲ್ಲ, ಪ್ರತ್ಯಕ್ಷ ತಾರತಮ್ಯವು ಈಗ ನಮ್ಮ ಸಮಾಜದ ವ್ಯವಸ್ಥೆಯಲ್ಲೇ ಬೇರು ಬಿಟ್ಟಿದೆ’ ಎಂದು ಹೇಳಿದ್ದಾರೆ. ‘ಈಗ ಜಾತಿ ಎಲ್ಲಿದೆ?’ ‘ಇನ್ನೂ ಮೀಸಲಾತಿಯನ್ನು ಯಾಕೆ ಮುಂದುವರಿಸಬೇಕು?’ಎಂಬಿತ್ಯಾದಿಯಾಗಿ ಪ್ರಶ್ನಿಸುವವರಿಗೆ ಚಂದ್ರಚೂಡ್ ಭಾಷಣದಲ್ಲಿ ಉತ್ತರಗಳಿವೆ. ‘‘ಬಹಿರಂಗ ತಾರತಮ್ಯವು ಈಗ ವ್ಯವಸ್ಥಿತ ರೂಪದಲ್ಲಿದೆ. ಜಾತಿವಾದಿ, ಸಮರ್ಥರ ಪರವಾಗಿರುವ, ಪುರುಷಪ್ರಧಾನ ಶ್ರೇಣಿ ವ್ಯವಸ್ಥೆ ದೇಶದಲ್ಲಿ ನೆಲೆಸಿದೆ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ‘‘ಕಾನೂನು ಶಾಲೆಗಳಿಗೆ ಸೇರುವ ಮುನ್ನವೇ ತಾರತಮ್ಯ ಆರಂಭವಾಗುತ್ತದೆ. ಪ್ರವೇಶ ಪರೀಕ್ಷೆ ಇಂಗ್ಲಿಷ್‌ನಲ್ಲಿ ಮಾತ್ರ ಇರುತ್ತದೆ. ಉನ್ನತ ಗುಣಮಟ್ಟದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯಲು ಶಕ್ತರಾದ ಅನುಕೂಲಸ್ಥರ, ಸ್ಥಿತಿವಂತರ ಮಕ್ಕಳು ಮಾತ್ರ ಅರ್ಹತೆ ಪಡೆಯಲಿದ್ದಾರೆ ಎಂಬುದು ಇದರ ಉದ್ದೇಶವಾಗಿರುತ್ತದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆಯಲು ಸಾಧ್ಯವಾಗದ, ಸರಕಾರಿ ಶಾಲೆಯಲ್ಲಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಮುಂದುವರಿಸಿದ ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳು ಉನ್ನತ ಕಾನೂನು ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗದ ವ್ಯವಸ್ಥೆಯಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವುದಕ್ಕೆ ಇದೂ ಪ್ರಮುಖ ಕಾರಣವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು, ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದ್ದರು. ‘ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಮಹಿಳೆಯರು ವಹಿಸಿಕೊಳ್ಳುವ ಸಮಯ ಬಂದಿದೆ’ ಎಂದು ಹೇಳಿಕೆ ನೀಡಿದ್ದರು. ಆದರೆ, ಮಹಿಳೆಯರು ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನವನ್ನು ಏರುವುದಕ್ಕೆ ವ್ಯವಸ್ಥೆಯೂ ಪೂರಕವಾಗಿರಬೇಕು. ಮಹಿಳೆಯರು ಮತ್ತು ಕೆಳಜಾತಿಗಳಿಗೆ ಅವರ ಹಕ್ಕುಗಳನ್ನು ಯಾವ ಭೇದಭಾವವಿಲ್ಲದೆ ನೀಡುವ ವ್ಯವಸ್ಥೆಯಿಂದಷ್ಟೇ ಮಹಿಳೆ ಅತ್ಯುನ್ನತ ಸ್ಥಾನವನ್ನು ಏರಲು ಸಾಧ್ಯ. ಮಹಿಳೆಯರು ಮಾತ್ರವಲ್ಲ, ಇಂದು ನ್ಯಾಯಾಂಗ ಮತ್ತು ಕಾರ್ಯಾಂಗದ ಅತ್ಯುನ್ನತ ಸ್ಥಾನಗಳಲ್ಲಿ ದಲಿತರು, ದುರ್ಬಲವರ್ಗಗಳ ಜನರ ಪ್ರಾತಿನಿಧ್ಯ ಹೆಚ್ಚಾಗಬೇಕಾಗಿದೆ.

ಎಲ್ಲಿಯವರೆಗೆ ಈ ಪ್ರಾತಿನಿಧ್ಯ ಹೆಚ್ಚಾಗುವುದಿಲ್ಲವೋ, ಅಲ್ಲಿಯವರೆಗೆ ಈ ದೇಶದಲ್ಲಿ ಜಾತೀಯ ವ್ಯವಸ್ಥೆ , ಲಿಂಗ ತಾರತಮ್ಯ ಇಳಿಮುಖವಾಗುವುದು ಸಾಧ್ಯವೇ ಇಲ್ಲ. ‘ಎಲ್ಲಿಯವರೆಗೆ ಮೀಸಲಾತಿಯನ್ನು ಮುಂದುವರಿಸುತ್ತೀರಿ?’ ಎಂಬ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆಗೆ ಅತ್ಯುತ್ತಮವಾದ ಉತ್ತರವೆಂದರೆ, ‘ಈ ದೇಶದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳಲ್ಲಿ ಅತ್ಯುನ್ನತ ಸ್ಥಾನಗಳನ್ನು ದುರ್ಬಲವರ್ಗದ ಸಮುದಾಯ ತನ್ನದಾಗಿಸುವವರೆಗೆ’ ಎನ್ನುವುದಾಗಿದೆ. ಸದ್ಯದ ಸಂದರ್ಭವನ್ನು ಗಮನಿಸಿದರೆ, ದಲಿತರು ಸೇರಿದಂತೆ ದುರ್ಬಲ ಸಮುದಾಯ ಇನ್ನಷ್ಟು ಹಿಂದಕ್ಕೆ ಚಲಿಸುತ್ತಿದೆ. ಕೊರೋನ ಕಾಲದಲ್ಲಿ ಈ ಸಮುದಾಯದಿಂದ ಶಿಕ್ಷಣವನ್ನು ವ್ಯವಸ್ಥಿತವಾಗಿ ದೂರವಿಡಲಾಗುತ್ತಿದೆ. ಆರ್ಥಿಕವಾಗಿ ಅವರು ಸಂಪೂರ್ಣ ದುರ್ಬಲರಾಗುತ್ತಿದ್ದಾರೆ. ಸಾಮಾಜಿಕವಾಗಿಯೂ ಬೇರೆ ಬೇರೆ ಕಾರಣಗಳಿಂದ ಹಿಂದಕ್ಕೆ ಚಲಿಸಲಾರಂಭಿಸಿದ್ದಾರೆ. ಇವು ಭವಿಷ್ಯದಲ್ಲಿ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿ ಅವರ ಪ್ರಾತಿನಿಧ್ಯಗಳನ್ನು ಇನ್ನಷ್ಟು ಕುಂಠಿತಗೊಳಿಸಲಿವೆ. ‘ಮೀಸಲಾತಿಗೆ ಒಂದು ಕಾಲಾವಧಿಯನ್ನು ವಿಧಿಸಬೇಕು’ ಎಂದು ಹೇಳುವವರಿದ್ದಾರೆ. ‘ಮೀಸಲಾತಿಯನ್ನು ಸಂಪೂರ್ಣ ಇಲ್ಲವಾಗಿಸಬೇಕು’ ಎಂದು ಒತ್ತಾಯಿಸುವವರೂ ಇದ್ದಾರೆ. ಮೀಸಲಾತಿಯ ಉದ್ದೇಶ, ದುರ್ಬಲ ಸಮುದಾಯವನ್ನು ಸಬಲಗೊಳಿಸುವುದು. ಮೀಸಲಾತಿ ಜಾರಿಗೊಂಡು ಐದು ದಶಕ ಕಳೆದಿರಬಹುದು. ಆದರೆ ಮೀಸಲಾತಿಯ ಗುರಿಯೇನಿದೆಯೋ ಅದನ್ನು ನಾವು ಸಾಧಿಸಿದ್ದೇವೆಯೇ? ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ಅಂದರೆ, ದಲಿತರು ಮತ್ತು ಈ ದೇಶದ ದುರ್ಬಲ ಸಮುದಾಯವನ್ನು ಮೇಲೆತ್ತುವಲ್ಲಿ ಮೀಸಲಾತಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ? ಈ ಬಗ್ಗೆ ಸಮಗ್ರವಾದ ಜಾತಿ ಸಮೀಕ್ಷೆಯೊಂದನ್ನು ನಡೆಸಿದರೆ ಸ್ಪಷ್ಟ ಉತ್ತರವನ್ನು ಕಂಡುಕೊಳ್ಳಬಹುದು.

ಚಂದ್ರಚೂಡ್ ಹೇಳಿದ ಹಾಗೆ, ಈ ದೇಶದಲ್ಲಿ ಜಾತೀಯತೆ ಇನ್ನೂ ಬಹಿರಂಗವಾಗಿ ಆಚರಣೆಯಲ್ಲಿದೆ. ಅವರನ್ನು ತುಳಿಯುವ ವ್ಯವಸ್ಥೆ ಎಂದಿಗಿಂತ ಹೆಚ್ಚು ಬಲಾಢ್ಯವಾಗಿದೆ. ಮೀಸಲಾತಿಯ ವೈಫಲ್ಯವನ್ನು ಇದು ಹೇಳುತ್ತದೆ. ಸಂವಿಧಾನ ಮೀಸಲಾತಿಯನ್ನೇನೋ ಜಾರಿಗೊಳಿಸಿತು. ಆದರೆ ಅದನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಮತ್ತೆ ಮೇಲ್‌ಜಾತಿಯ ಪ್ರಾಬಲ್ಯವನ್ನು ಹೊಂದಿರುವ ಕಾರ್ಯಾಂಗಕ್ಕೆ ವಹಿಸಿತು. ಯಾವ ಸಮುದಾಯ ದಲಿತರನ್ನು ಶೋಷಿಸುತ್ತಾ ಬಂದಿತ್ತೋ, ಅದೇ ಸಮುದಾಯದ ಕೈಗೆ ಮೀಸಲಾತಿ ಜಾರಿಯ ಹೊಣೆಗಾರಿಕೆಯನ್ನು ನೀಡಿದರೆ, ಗುರಿ ಈಡೇರುವುದು ಹೇಗೆ ಸಾಧ್ಯ? ಇಂದಿಗೂ ದೇಶದ ಪ್ರಮುಖ ಅಂಗವಾಗಿರುವ ಕಾರ್ಯಾಂಗದ ಅತ್ಯುತ್ತಮ ಹುದ್ದೆಗಳಲ್ಲಿ ಪ್ರಬಲ ಜಾತಿಯ ಜನರೇ ತುಂಬಿಕೊಂಡಿದ್ದಾರೆ. ಅವರಿಂದ ದುರ್ಬಲ ಜಾತಿಗಳಿಗೆ ನ್ಯಾಯ ಸಿಗುವುದು ಸಾಧ್ಯವೇ? ಇದೊಂದು ರೀತಿ ‘ಮದುವೆಯಾಗದೇ ಹುಚ್ಚು ಬಿಡದು, ಹುಚ್ಚು ಬಿಡದೇ ಮದುವೆಯಾಗದು’ ಎನ್ನುವ ಗಾದೆಯಂತಾಗಿದೆ.

ಉನ್ನತ ಸ್ಥಾನಗಳಲ್ಲಿ ದುರ್ಬಲ ಜಾತಿಯ ಜನರು ಬರದೇ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸಾಧ್ಯವಿಲ್ಲ. ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಯಾಗದೇ ಇದ್ದರೆ ಉನ್ನತ ಸ್ಥಾನಕ್ಕೆ ದುರ್ಬಲ ಜಾತಿಯ ಜನರು ಆಯ್ಕೆಯಾಗುವುದೂ ಸಾಧ್ಯವಿಲ್ಲ. ವಿಪರ್ಯಾಸವೆಂದರೆ, ಈ ಹಿಂದೆ ಶೋಷಿತರೆಲ್ಲ ಸಂಘಟಿತರಾಗಿ ‘ಬಹುಜನ’ರೆಂದು ಗುರುತಿಸಲ್ಪಡುತ್ತಿದ್ದರು. ಈಗ ‘ಶೋಷಕರೇ ಸಂಘಟಿತರಾಗಿ ‘ಬಹುಜನ’ರಾಗುವ ಪ್ರಯತ್ನದಲ್ಲಿದ್ದಾರೆ. ಯಾವುದೇ ಹೋರಾಟ, ಪ್ರತಿಭಟನೆಗಳಿಲ್ಲದೆ ಮೀಸಲಾತಿಗಳನ್ನು ಪ್ರಬಲ ಜಾತಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರು ಇನ್ನಷ್ಟು ಬಲಾಢ್ಯರಾಗುತ್ತಾರೆ. ಪರಿಣಾಮ, ದುರ್ಬಲರು ಇನ್ನಷ್ಟು ದುರ್ಬಲರಾಗುತ್ತಾರೆ.

‘ಮೀಸಲಾತಿಯು ಜಾತಿ ಕಾರಣದಿಂದ ಶೋಷಣೆಗೊಳಗಾದವರ ಹಕ್ಕು. ಅದನ್ನು ಮೇಲ್‌ಜಾತಿಗೆ ನೀಡಕೂಡದು’ ಎಂದು ಒಂದೇ ಧ್ವನಿಯಲ್ಲಿ ಸರಕಾರಕ್ಕೆ ಕೇಳಿಸುವಷ್ಟು ಜೋರಾಗಿ ಹೇಳುವ ಶಕ್ತಿಯನ್ನೇ ದುರ್ಬಲ ಸಮುದಾಯಗಳು ಕಳೆದುಕೊಂಡಿವೆ. ದಿನದಿಂದ ದಿನಕ್ಕೆ ಮೀಸಲಾತಿ ದುರ್ಬಲಗೊಳ್ಳುತ್ತಿದೆ. ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ, ತಳವರ್ಗದ ಸಮುದಾಯಗಳು ಎಲ್ಲ ಭಿನ್ನಮತಗಳನ್ನು ತೊರೆದು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಂಘಟಿತವಾಗುವುದರಿಂದಷ್ಟೇ, ತಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ. ಆ ಮೂಲಕ ಮಾತ್ರವೇ ಕೈ ತಪ್ಪಿರುವ ತಮ್ಮ ಹಕ್ಕುಗಳನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News