ಕರ್ತವ್ಯಕ್ಕೆ ಹಾಜರಾಗಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಸ್ ಚಾಲಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಘೋಷಣೆ

Update: 2021-04-16 18:46 GMT

ಬೆಂಗಳೂರು, ಎ.16: ಸಾರಿಗೆ ನೌಕರರ ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾಗಿ ದುಷ್ಕರ್ಮಿಗಳ ಹಲ್ಲೆಯಿಂದಾಗಿ ಸಾವನ್ನಪ್ಪಿದ ಚಾಲಕ ನಬಿ ರಸೂಲ್ ಆವಟಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಲಾಗುವುದೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಆವಟಿ ಎಂಬವರು ಜಮಖಂಡಿಯ ಸಮೀಪದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ನಡೆಸಿದ ಹಲ್ಲೆಯಿಂದ ಸಾವಿಗೀಡಾಗಿದ್ದಾರೆ. ಮೃತರ ಆತ್ಮಕ್ಕೆ ನಾನು ಶಾಂತಿ ಕೋರುತ್ತೇನೆ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳನ್ನು ತಿಳಿಸಬಯಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ನೀಡಲು ಹಾಗೂ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ತಿಳಿಸಿದ್ದಾರೆ.

ಶಾಂತಿಯುತವಾಗಿ ಮುಷ್ಕರ ನಡೆಸುತ್ತೇವೆಂದ ಮುಷ್ಕರ ನಿರತರು, ತಮ್ಮ ಸಹೋದ್ಯೋಗಿಯ ಜೀವವನ್ನೇ ಬಲಿ ತೆಗೆದುಕೊಂಡಿರುವುದು ತೀವ್ರ ಖಂಡನೀಯ. ತಾವು ಕೆಲಸ ಮಾಡುವುದಿಲ್ಲ, ಇತರ ನಿಷ್ಠಾವಂತರಿಗೂ ಕೆಲಸ ಮಾಡಲು ಬಿಡುವುದಿಲ್ಲ. ಇಂತಹ ಪ್ರತಿಭಟನಾಕಾರರ ಧೋರಣೆ ಎಷ್ಟರ ಮಟ್ಟಿಗೆ ಸರಿ. ಈ ರೀತಿ ಹಿಂಸಾಕೃತ್ಯ ನಡೆಸುವವರನ್ನು ಸರಕಾರ ಎಂದಿಗೂ ಕ್ಷಮಿಸುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News