ಮೂರು ಕ್ಷೇತ್ರಗಳ ಉಪಚುನಾವಣೆ: ಶಾಂತಿಯುತ ಮತದಾನ, ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ

Update: 2021-04-17 16:10 GMT

ಬೆಂಗಳೂರು, ಎ. 17: ರಾಜ್ಯದ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಡೆದ ಮತದಾನ ಕೆಲ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯ ಕಂಡಿದೆ.

ಮೂರು ಕ್ಷೇತ್ರಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗಾವಿ-ಶೇ.54.73, ಬಸವಕಲ್ಯಾಣ- ಶೇ.59.57 ಹಾಗೂ ಮಸ್ಕಿ ಕ್ಷೇತ್ರದಲ್ಲಿ ಶೇ.70.48ರಷ್ಟು ಮತದಾನವಾಗಿದೆ. ಮೂರು ಕ್ಷೇತ್ರಗಳಲ್ಲಿ ಒಟ್ಟು 30 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದು, ಮೇ 2ರಂದು ಮತ ಏಣಿಕೆ ನಡೆಯಲಿದ್ದು, ಅಂದೇ ಉಪಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಮತ್ತು ಶಾಸಕ ಬಿ.ನಾರಾಯಣರಾವ್ ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಬಸವಕಲ್ಯಾಣ ಹಾಗೂ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಂಗಳಾ ಅಂಗಡಿ, ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ಸೇರಿದಂತೆ ಹತ್ತು ಮಂದಿ ಅಭ್ಯರ್ಥಿಗಳಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಬಸವಕಲ್ಯಾಣ ಕ್ಷೇತ್ರ ನಾರಾಯಣರಾವ್ ಅವರ ಪತ್ನಿ ಕಾಂಗ್ರೆಸ್‍ನ ಮಾಲಾ, ಬಿಜೆಪಿಯ ಶರಣು ಸಲಗರ್, ಜೆಡಿಎಸ್‍ನ ಸೈಯದ್ ಯಸ್ರಬ್ ಆಲಿ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸಹಿತ 12 ಮಂದಿ ಅಭ್ಯರ್ಥಿಗಳಿದ್ದಾರೆ. ಪರಿಶಿಷ್ಟ  ಪಂಗಡದ ಮೀಸಲು ಕ್ಷೇತ್ರವಾದ ಮಸ್ಕಿಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‍ನ ಬಸನಗೌಡ ಪಾಟೀಲ್ ತುರ್ವಿಹಾಳ ಸೇರಿ ಎಂಟು ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಬೆಳಗಾವಿ ಕ್ಷೇತ್ರದಲ್ಲಿ 2,566, ಬಸವಕಲ್ಯಾಣ ಕ್ಷೇತ್ರದಲ್ಲಿ 326 ಹಾಗೂ ಮಸ್ಕಿ ಕ್ಷೇತ್ರದಲ್ಲಿ 305 ಸೇರಿದಂತೆ ಒಟ್ಟು 3,197 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಮಾರ್ಗಸೂಚಿ ಅನ್ವಯ ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಂತರ ಕಾಯ್ದುಕೊಂಡು ಮತದಾನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ವೃದ್ಧರು, ಮಹಿಳೆಯರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಯುವಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ: ಮಸ್ಕಿ ಕ್ಷೇತ್ರದ ವಟಗಲ್ ಗ್ರಾಮದ ಬಸವರಾಜ್ ಎಂಬ ವ್ಯಕ್ತಿ ತಾನು ಮತ ಚಲಾಯಿಸಿದ ವಿಡಿಯೋವನ್ನು ವಾಟ್ಸ್‍ಆಪ್, ಫೇಸ್‍ಬುಕ್ ಸಹಿತ ಜಾಲತಾಣದಲ್ಲಿ ಹರಿಬಿಟ್ಟು ಯಡವಟ್ಟು ಮಾಡಿದ್ದಾನೆ. ಈ ಸಂಬಂಧ ಬಸವರಾಜ್ ವಿರುದ್ಧ ಚುನಾವಣಾಧಿಕಾರಿ ರಾಜಶೇಖರ ಡಂಬಳ ದೂರು ದಾಖಲಿಸಿದ್ದು, ಕವಿತಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಪಿಇ ಕಿಟ್ ಧರಿಸಿ ಮತದಾನ: ಕೊರೋನ ಸೋಂಕಿತರಿಗೆ ಸಂಜೆ 6ಗಂಟೆಯಿಂದ 7 ಗಂಟೆಯ ವರೆಗೆ ಮತದಾನ ಅವಕಾಶ ಕಲ್ಪಿಸಲಾಗಿತ್ತು. ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಅವರು ಸಂಜೆ 6:30ರ ಸುಮಾರಿಗೆ ಪಿಪಿಇ ಕಿಟ್ ಧರಿಸಿ ತಮ್ಮ ಹಕ್ಕು ಚಲಾಯಿಸಿದರು ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಹಕ್ಕು ಚಲಾಯಿಸಿದ ಅಭ್ಯರ್ಥಿಗಳು: ಬಿಜೆಪಿ ಅಭ್ಯರ್ಥಿ ಮಂಗಳಾ ಅವರು ಬೆಳಗ್ಗೆಯೇ ಬೆಳಗಾವಿಯ ಸದಾಶಿವನಗರ ಸರಕಾರಿ ಶಾಲೆ ಮತಗಟ್ಟೆಯಲ್ಲಿ ಪುತ್ರಿಯೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರೆ, ಅತ್ತ ಕಾಂಗ್ರೆಸ್ ಅಭ್ಯರ್ಥಿ ಗೋಕಾಕ್ ನಗರದ ಜಿಆರ್‍ಬಿಸಿ ಕಾಲನಿಯ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 162ರಲ್ಲಿ ಸಂಜೆ 4 ಗಂಟೆಯ ಸುಮಾರಿಗೆ ಮತದಾನ ಮಾಡಿದರು. ಇಬ್ಬರೂ ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಮತದಾರ ಯಾರಿಗೆ ವಿಜಯಮಾಲೆ ಹಾಕಿದ್ದಾನೆಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮೂರು ಕ್ಷೇತ್ರಗಳಲ್ಲಿ ಹಣ ಹಂಚಿಕೆ ಆರೋಪ-ಪ್ರತ್ಯಾರೋಪ, ಅಭ್ಯರ್ಥಿಯ ಭಾವಚಿತ್ರದ ಓಟರ್ ಸ್ಲಿಪ್ ವಿತರಣೆ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಅಲ್ಲಲ್ಲಿ ಮಾತಿನ ಚಕಮಕಿ, ಘರ್ಷಣೆಯ ವರದಿಗಳು ಬಂದಿವೆ. ಮುನ್ನಚ್ಚರಿಕೆ ಕ್ರಮವಾಗಿ ಮೂರು ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಮ್ಮ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು ಹದಿನೈದು ದಿನಗಳ ಕಾಲ ಮೂರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News